ಅಂತರ್ ರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ: ಕೋಟ್ಯಾಂತರ ಮೌಲ್ಯದ ಬೆಳ್ಳಿ ಆಭರಣ, 2 ಕಾರು ಜಪ್ತಿ

Update: 2019-01-12 12:25 GMT

ದಾವಣಗೆರೆ,ಜ.12: ಅಂತರ್ ರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು ಸುಮಾರು 1 ಕೋಟಿ ರೂ. ಮೌಲ್ಯದ ಬೆಳ್ಳಿ ಆಭರಣಗಳು, 2 ದುಬಾರಿ ಬೆಲೆಯ ಕಾರುಗಳು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಹೇಳಿದರು. 

ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿ. 29 ರಂದು ಬೆಳಗ್ಗೆ 3.30ರ ವೇಳೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಿಂದ ಜಗನ್ನಾಥ್ ಖಂಡೇಕರ್ ಎಂಬವರು ತಮ್ಮ ಕಾರಿನಲ್ಲಿ ಸುಮಾರು 300 ಕೆಜಿ ಬೆಳ್ಳಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ, ದಾವಣಗೆರೆಯ ಗ್ರಾಮಾಂತರ ಠಾಣೆವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದ ಬಳಿ ಎನ್ ಹೆಚ್-4 ರ ಹೆದ್ದಾರಿ ರಸ್ತೆಯಲ್ಲಿ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಕಳ್ಳತನ ನಡೆಸಿದ್ದರು. ಈ ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು 8 ಮಂದಿ ದರೋಡೆಕೋರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರದ ನಿಸಾರ್ (44) ಕೊಲ್ಲಾಪುರದ ಉಪರಿಯ ರಾಹುಲ್ (36) ಎಂಬವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜೊತೆಗಾರರ ಬಗ್ಗೆ ಮಾಹಿತಿ ನೀಡಿದ್ದಾರೆ.

ನಂತರ ಪೊಲೀಸರು ತನಿಖೆ ಮುಂದುವರೆಸಿ ಮಹಾರಾಷ್ಟ್ರದ ಈಚಲಕರಂಜಿಯ ನದೀಮ್ (25) ಉಪರಿ ಗ್ರಾಮದ ಜಾಕೀರ್ ಸಾಬ್ (20) ಬಳ್ಳಾರಿಯ ನಾಗಾರಾಜ್ (46) ಆಂಧ್ರ ಪ್ರದೇಶದ ಶ್ಯಾಮಸುಂದರ್ (46) ಮನೋಹರ್ (45) ಕರ್ನೂಲ್‍ನ ಉದಯ್‍ಕುಮಾರ್ (36) ಅವರುಗಳನ್ನು ಬಂಧಿಸಲಾಗಿದೆ.

ದಾವಣಗೆರೆ ಸಮೀಪದ ಹೆಬ್ಬಾಳು ಗೇಟ್ ದಾಟಿದ ನಂತರ ವ್ಯವಸ್ಥಿತವಾಗಿ ಸಂಚುರೂಪಿಸಿದ್ದ ದರೋಡೆಕೋರರು 2 ತಂಡಗಳಲ್ಲಿ ತಮ್ಮ ಕಾರುಗಳಲ್ಲಿ ತೆರಳಿದ್ದಾರೆ. ನಂತರ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ಚಾಕು ಹಾಗೂ ರಿವಾಲ್ವರ್ ಗಳಿಂದ ಹೆದರಿಸಿ, ಅಪಹರಣ ಮಾಡಿ ನಂತರ ನಿರ್ಜನ ಪ್ರದೇಶಕ್ಕೆ ತೆರಳಿ ಅಪಹರಿಸಿದ್ದ ಮಾಲನ್ನು ತುಂಬಿಕೊಂಡು ಕಾರನ್ನು ಹಾಗೂ ಅಪಹರಿಸಿದವರನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ಬಳಿಕ ಕದ್ದ ಮಾಲನ್ನು ಕೊಲ್ಲಾಪುರಕ್ಕೆ ತೆಗೆದುಕೊಂಡು ಹೋಗಿ ಅದರಲ್ಲಿ ಕೆಲವನ್ನು ಮಾರಾಟ ಮಾಡಿ ದರೋಡೆಗೆ ಸಾಥ್ ನೀಡುತ್ತಿದ್ದ ಬಳ್ಳಾರಿನಾಗ ಹಾಗೂ ಆತನ ಕಡೆಯವರಿಗೆ ನೀಡಿರುವುದಾಗಿ ತನಿಖೆ ವೇಳೆ ದರೋಡೆಕೋರರು ತಿಳಿಸಿದ್ದಾರೆ.

ಈ ಪ್ರಕರಣ ಬೇಧಿಸುವಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗುರುಬಸವರಾಜ್, ಪಿಎಸ್‍ಐ ಕಿರಣ್‍ಕುಮಾರ್, ಹದಡಿ ಪೊಲೀಸ್ ಠಾಣೆಯ ಪಿಎಸ್‍ಐ ರಾಜೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಬಾಲರಾಜ್, ಮಹೇಶ್, ವೆಂಕಟೇಶ್, ಹಾಲೇಶ್, ಮಂಜಪ್ಪ, ಮಂಜುನಾಥ್, ಕೆ.ಪ್ರಕಾಶ್, ನರೇಂದ್ರಮೂರ್ತಿ, ಮಾರುತಿ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್, ಎಂ.ಪಿ.ರಮೇಶ್, ಅಣ್ಣಪ್ಪ, ಶ್ರೀನಿವಾಸ್ ಅವರ ತಂಡ ಪ್ರಮುಖ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಒಂದು ರಿವಾಲ್ವರ್, 5 ಜೀವಂತ ಗುಂಡುಗಳು, ಮಾರಕಾಸ್ತ್ರಗಳು ಸೇರಿದಂತೆ ದರೋಡೆಯಾಗಿದ್ದ ಸುಮಾರು 240 ಕೆಜಿ ಆಭರಣ ವಶಪಡಿಕೊಂಡಿದ್ದಾರೆ. ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News