ಪೌರಕಾರ್ಮಿಕರಿಗೆ ಕಾಲಮಿತಿಯಲ್ಲಿ ವೇತನ ನೀಡಲು ಕ್ರಮ: ಸಚಿವ ಸಿ.ಎಸ್.ಶಿವಳ್ಳಿ

Update: 2019-01-12 12:27 GMT

ಕೊಪ್ಪಳ, ಜ. 12: ರಾಜ್ಯದಲ್ಲಿನ ಪೌರಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ, ಭತ್ತೆ ಒದಗಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಯಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಪೌರ ಕಾರ್ಮಿಕರಿಗೆ ವೇತನ ಸಹಿತ ಅಗತ್ಯ ಸೌಲಭ್ಯ ಕಲ್ಪಿಸಲು ವಿಶೇಷ ಆಸ್ಥೆ ವಹಿಸಲಿದ್ದೇನೆ. ಅಲ್ಲದೆ, ಪೌರಾಡಳಿತ ಇಲಾಖೆ ಬಗ್ಗೆ ಮಾಹಿತಿ ಪಡೆದು, ಅಧಿಕಾರಿಗಳ ಜತೆ ಚರ್ಚಿಸಿ ಇಲಾಖೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.

ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗದು: ಬಿಜೆಪಿ ಎಷ್ಟೇ ಆಮಿಷವೊಡ್ಡಿದರೂ, ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದು ಶಿವಳ್ಳಿ ನುಡಿದರು.

ಮೈತ್ರಿ ಸರಕಾರ ಎಂದರೆ ಸಣ್ಣ-ಪುಟ್ಟ ಮನಸ್ತಾಪ ಸಹಜ. ಅವುಗಳನ್ನು ಮಾತುಕತೆ ಮೂಲಕ ಸರಿಪಡಿಸಿಕೊಳ್ಳುತ್ತೇವೆ. ಆದರೆ, ರಾಜ್ಯದಲ್ಲಿನ ಮೈತ್ರಿ ಸರಕಾರ ಬೀಳಲಿದೆ ಎಂದು ಆರು ತಿಂಗಳಿಂದ ಬಿಜೆಪಿ ಹೇಳುತ್ತಲೇ ಇದೆ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಶೀಘ್ರವೇ ನ್ಯಾಯಾಲಯ ಆದೇಶ ಬರುವ ನಿರೀಕ್ಷೆ ಇದೆ ಎಂದ ಶಿವಳ್ಳಿ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News