ಪುತ್ರಿಯ ಮದುವೆಗೆ ಬಂದೋಬಸ್ತ್ ಬೇಕೆಂದ ಹೈಕೋರ್ಟ್ ನ್ಯಾಯಾಧೀಶರಿಗೆ ಮಧುಕರ್ ಶೆಟ್ಟಿ ಹೇಳಿದ್ದೇನು ?

Update: 2019-01-12 14:42 GMT

ಚಿಕ್ಕಮಗಳೂರು, ಜ.12: ಜಾತಿಯನ್ನೇ ನೀತಿ ಮಾಡಿಕೊಂಡಿರುವ ಸಮಾಜದಲ್ಲಿ ಓರ್ವ ಪ್ರಾಮಾಣಿಕ ಐಪಿಎಸ್ ಅಧಿಕಾರಿಯನ್ನು ಜನತೆ ಜಾತ್ಯತೀತವಾಗಿ ಪ್ರೀತಿಸುತ್ತಿರುವುದರ ಹಿಂದೆ ಆ ಅಧಿಕಾರಿಯ ಸಮಾಜಮುಖಿ, ಮಾನವೀಯ ಮುಖದ ಕಾರ್ಯವೈಖರಿ ಅಡಗಿದೆ. ಪ್ರಸಕ್ತ ಸಮಾಜ ಓರ್ವ ಅಧಿಕಾರಿ ಎಷ್ಟೇ ಪ್ರಾಮಾಣಿಕವಾಗಿ, ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿದರೂ ಜಾತಿ ನೋಡಿ ಹೀರೋ ಮಾಡುತ್ತದೆ. ಕೆಳವರ್ಗದವರು ಇಂತಹ ಕೆಲಸ ಮಾಡಿದರೆ ಆತನನ್ನು ಎಲ್ಲ ಹಂತದಲ್ಲೂ ತುಳಿಯಲಾಗುತ್ತದೆ. ಮಧುಕರ್ ಶೆಟ್ಟಿ ವಿಚಾರದಲ್ಲಿ ಇದು ನಿರಂತರವಾಗಿ ನಡೆಯಿತು ಎಂದು ಚಿಂತಕ ಸಿ.ಎಸ್.ದ್ವಾರಕನಾಥ್ ವಿಷಾದ ವ್ಯಕ್ತಪಡಿಸಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ರೈತಸಂಘ, ದಲಿತ ಸಂಘರ್ಷ ಸಮಿತಿ ಮತ್ತಿತರ ಪ್ರಗತಿಪರ, ಕನ್ನಡಪರ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ "ಮಧುಕರ್ ಶೆಟ್ಟಿ ಒಂದು ನೆನಪು" ಕಾರ್ಯಕ್ರಮದಲ್ಲಿ "ಕುಸಿಯುತ್ತಿರುವ ಮೌಲ್ಯಗಳು ಮತ್ತು ಸಮಾಜಿಕ ಜವಾಬ್ದಾರಿ" ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ದೇಶದಲ್ಲಿ ಮಧುಕರ್ ಶೆಟ್ಟಿಯಂತಹ ನೂರಾರು ಅಧಿಕಾರಿಗಳು ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಂಹಸ್ವಪ್ನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರಿಗಳು, ಮಾಫಿಯಾಗಳು ಹಾಗೂ ಲಜ್ಜೆ ಇಲ್ಲದ ರಾಜಕಾರಣಿಗಳು ಇಂತಹ ಅಧಿಕಾರಿಗಳ ಸಮಾಜಮುಖಿ ಕಾರ್ಯಶೈಲಿ ಸಹಿಸದೇ ವಿವಿಧ ರೀತಿಯ ಮಾನಸಿಕ ಹಿಂಸೆ ನೀಡುತ್ತಾ ಬಲಿ ಪಡೆಯುತ್ತಿದ್ದಾರೆ. ಕೆಲ ಪ್ರಾಮಾಣಿಕ ಅಧಿಕಾರಿಗಳನ್ನು ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ. ಮಧುಕರ್ ಶೆಟ್ಟಿಯಂತಹ ಸಮಾಜಮುಖಿ ಅಧಿಕಾರಿಯ ಅಕಾಲಿಕ ಸಾವಿನ ಹಿಂದೆ ಭ್ರಷ್ಟ ವ್ಯವಸ್ಥೆ ಮತ್ತು ಸರಕಾರ ನೀಡಿರುವ ಮಾನಸಿಕ ಕಿರುಕುಳದ ಕಾರಣವಿದೆ ಎಂದು ಅವರು ಆರೋಪಿಸಿದರು.

ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತಿ ವ್ಯವಸ್ಥೆ ಹಾಗೂ ಭ್ರಷ್ಟಚಾರದಿಂದಾಗಿ ಪ್ರಸಕ್ತ ಸರಕಾರಿ ಅಧಿಕಾರಿಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಕಾಲಘಟದಲ್ಲೂ ತಮ್ಮ ರಾಜಿರಹಿತ ಸಮಾಜಮುಖಿ ಚಿಂತನೆಯಿಂದಾಗಿ ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರು ಸೇರಿದಂತೆ ಹೋದಲ್ಲೆಲ್ಲ ಅಳಿಯದ ನೆನಪು ಬಿಟ್ಟು ಹೋಗಿದ್ದಾರೆಂದ ಅವರು, ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ವೇಳೆ ಬಡಜನರ ಪರವಾಗಿ ಕಾರ್ಯನಿರ್ವಹಿಸಿದ್ದರು. ಅಧಿಕಾರವಿದ್ದರೂ ಭೂರಹಿತರಿಗೆ ಭೂಮಿ ಹಂಚಲು ಹೆಣಗುತ್ತಿರುವ ರಾಜಕಾರಣಿಗಳಿಗೆ, ಸರಕಾರಗಳಿಗೆ ಮಾದರಿಯಾಗುವಂತೆ ಪ್ರಭಾವಿಗಳ ಭೂಮಿ ಕಿತ್ತು ಬಡಜನರಿಗೆ ಹಂಚಿದ್ದರು. ಇದರಿಂದ ಬೆದರಿದ ಒಂದು ವರ್ಗ ಸರಕಾರದ ಮೇಲೆ ಪ್ರಭಾವ ಬೀರಿ ಅವರನ್ನು ವರ್ಗಾವಣೆ ಮಾಡಿ ಅವರ ಕೈ ಕಟ್ಟಿಹಾಕುವ ಪ್ರಯತ್ನ ಮಾಡಿತು. ಆದರೂ ಶೆಟ್ಟಿ ಅವರ ಕಾರ್ಯಶೈಲಿ ಬದಲಾಗಲಿಲ್ಲ. ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಪ್ರಭಾವಿ ಮಂತ್ರಿ ಹಾಗೂ ಆವರ ಮಗ ಸೇರಿದಂತೆ ಕೆಲ ಶಾಸಕರ ಭ್ರಷ್ಟಚಾರವನ್ನು ಬಯಲಿಗೆಳೆದು ಜೈಲಿಗೆ ಕಳುಹಿಸಿದರು. ಈ ಕಾರ್ಯವೈಖರಿಯಿಂದ ರಾಜ್ಯ ಲೋಕಾಯುಕ್ತ ಸಂಸ್ಥೆ ಖ್ಯಾತಿ ಪಡೆಯುವಂತಾಯಿತು. ಗಣಿ ಲೂಟಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ತನಿಖೆ ಕೈಗೊಂಡು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದರು. ಆದರೆ ಭ್ರಷ್ಟ ರಾಜಕೀಯ ವ್ಯವಸ್ಥೆ ಅದನ್ನು ಬೆಳಕಿಗೆ ಬಾರದಂತೆ ತಡೆಯಿತು. ಅದು ಬೆಳಕಿಗೆ ಬಂದಿದ್ದರೆ ಇಂದಿನ ರಾಜಕಾರಣಿಗಳಲ್ಲಿ ಬಹುತೇಕರು ಜೈಲಿನಲ್ಲಿರುತ್ತಿದ್ದರು ಎಂದರು.

ಉಚ್ಚ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ್ ಶೆಟ್ಟಿ ಒಮ್ಮೆ ತಮ್ಮ ಮಗಳ ಮದುವೆಗೆ ಪೊಲೀಸ್ ಬಂದೋಬಸ್ತ್ ಬೇಕೆಂದು ಮಧುಕರ್ ಶೆಟ್ಟಿ ಅವರಲ್ಲಿ ಜಾತಿ ಬಾಂಧವ್ಯದಿಂದ ಮೌಖಿಕವಾಗಿ ಕೇಳಿದ್ದರು. ಆದರೆ ಶೆಟ್ಟಿ ಅವರು 'ಬಂದೋಬಸ್ತ್ ಬೇಕೆಂದು ಲಿಖಿತವಾಗಿ ಬರೆದುಕೊಡಬೇಕು. ಅಲ್ಲದೇ ಸರಕಾರ ನಿಗದಿ ಮಾಡಿರುವ ಶುಲ್ಕವನ್ನೂ ಪಾವತಿಸಿದಲ್ಲಿ ಪೊಲೀಸ್ ಭದ್ರತೆ ಒದಗಿಸುವುದಾಗಿ' ಹೇಳಿದ್ದರು. ಇದಕ್ಕೆ ನ್ಯಾ.ವಿಶ್ವನಾಥ್ ಶೆಟ್ಟಿ ಅವರು, ಈ ಯುವ ಅಧಿಕಾರಿಯ ಮಾತು ತನಗೆ ಕಾನೂನಿನ ಪಾಠ ಮಾಡಿಸಿತು ಎಂದು ತನ್ನ ಬಳಿ ಹೇಳಿಕೊಂಡಿದ್ದರು. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಸಂವಿಧಾನದ ಧ್ಯೇಯವನ್ನು ಮಧುಕರ್ ಶೆಟ್ಟಿ ಚಾಚೂ ತಪ್ಪದೇ ಪಾಲಿಸುತ್ತಿದ್ದುದಕ್ಕೆ ಇದು ಸಾಕ್ಷಿ. ಸರಳ ವ್ಯಕ್ತಿತ್ವದ ನಿಷ್ಠಾವಂತ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ತಮ್ಮ ಮಗನನ್ನು ಹಾಗೆಯೇ ಬೆಳೆಸಿದ್ದರು ಎಂದು ಅವರು ತಮ್ಮ ನೆನಪನ್ನು ಬಿಚ್ಚಿಟ್ಟರು.

ಅಮೇರಿಕದಲ್ಲಿ ಉನ್ನತ ಶಿಕ್ಷಣ ಮುಗಿಸಿ ಬಂದ ತರುವಾಯ ಅವರಿಗೆ ಜನಸಾಮಾನ್ಯರ ಪರ ಕಾರ್ಯ ನಿರ್ವಹಿಸುವ ಇರಾದೆ ಇತ್ತು. ಆದರೆ ಸರಕಾರ ಅವರನ್ನು ಹೈದರಾಬಾದಿನಲ್ಲಿ ಉನ್ನತ ಹುದ್ದೆ ನೀಡಿ ಅವರು ಜನರಿಗೆ ಸ್ವಂದಿಸುವ ತುಡಿತವನ್ನೇ ಅವಮಾನಿಸಿತು. ಇದರಿಂದ ಬೇಸತ್ತಿದ್ದ ಅವರು ವ್ಯವಸ್ಥೆ ಬಗೆಗೆ ಕೋಪ, ಸಿಟ್ಟು ಹೊಂದಿದ್ದರು. ಮಧುಕರ್ ಶೆಟ್ಟಿ ಅವರ ಸಾವಿಗೆ ಸರಕಾರ ನೀಡಿದ ಮಾನಸಿಕ ಕಿರುಕುಳವೂ ಕಾರಣವಾಗಿದೆ. ಸರಕಾರಕ್ಕೆ ನಿರ್ಜೀವವಾದ ಮಧುಕರ್ ಶೆಟ್ಟಿ ಬೇಕಿತ್ತು, ಜೀವಂತ ಮಧುಕರ್ ಶೆಟ್ಟಿ ಬೇಕಿರಲಿಲ್ಲ. ಅವರಲ್ಲಿ ಪ್ರಾಮಾಣಿಕತೆ, ಸಮಾಜಮುಖಿ ಚಿಂತನೆ ತುಂಬಿತುಳುಕುತ್ತಿದ್ದ ಕಾರಣಕ್ಕೆ ಪದೇ, ಪದೇ ವರ್ಗಾವಣೆಯ ಶಿಕ್ಷೆ ನೀಡಲಾಯಿತು. ಪ್ರಾಮಾಣಿಕ ಅಧಿಕಾರಿಗಳಿಗೆ ಸರಕಾರ ನೀಡುವ ಉಡುಗೊರೆಯೇ ಮಾನಸಿಕ ಕಿರುಕುಳ. ಇಂತಹ ಕಿರುಕುಳದಿಂದಾಗಿ ದೇಶ ಪ್ರಾಮಾಣಿಕ ಅಧಿಕಾರಿಗಳನ್ನು ಕಳೆದುಕೊಳ್ಳುತ್ತಿದೆ ಎಂದ ವಿಷಾದಿಸಿದ ಅವರು, ಯುವಜನತೆ ದೇಶದ ಭವಿಷ್ಯ, ಮಧುಕರ್ ಶೆಟ್ಟಿ ಅವರ ಆದರ್ಶ, ಸಮಾಜಮುಖಿ ಚಿಂತನೆ ಯುವಜನತೆಗೆ ಮಾದರಿಯಾಗಬೇಕೆಂದರು.

ಕಾರ್ಯಕ್ರಮದಲ್ಲಿ ರೈತಸಂಘದ ಗುರುಶಾಂತಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು, ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್, ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ, ಸಿಪಿಐ ಮುಖಂಡ ರೇಣುಕಾರಾದ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮತ್ತಿತರರು ಮಾತನಾಡಿದರು.

ಚಿಂತಕ ರುದ್ರಸ್ವಾಮಿ, ರೈತಸಂಘದ ಮಹೇಶ್, ಪುಟ್ಟಸ್ವಾಮಿಗೌಡ, ಕರವೇ ತೇಗೂರು ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಶೆಟ್ಟಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ 1 ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News