ಪ್ರತಿ ವರ್ಷ ಕೊಡಗಿನಲ್ಲಿ ಪ್ರವಾಸಿ ಉತ್ಸವ ಆಚರಣೆ: ಸಚಿವ ಸಾ.ರಾ.ಮಹೇಶ್ ಭರವಸೆ

Update: 2019-01-12 15:29 GMT

ಮಡಿಕೇರಿ, ಜ.12 : ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಗಳಿಸಿರುವ ಕಾವೇರಿ ನಾಡು ಕೊಡಗು ಜಿಲ್ಲೆ ಕಳೆದ ಆಗಸ್ಟ್ ತಿಂಗಳ ಮಹಾಮಳೆಯಿಂದ ನಲುಗಿ ಹೋಗಿತ್ತು. ಮತ್ತೆ ಹಿಂದಿನ ವೈಭವವನ್ನು ಮರಳಿ ತರಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಹೆಚ್ಚಿನ ಕಾಳಜಿ ವಹಿಸಿ ಕೊಡಗು ಪ್ರವಾಸಿ ಉತ್ಸವವನ್ನು ಆಯೋಜಿಸುವ ಮೂಲಕ ಪ್ರವಾಸಿಗರ ಗಮನ ಸೆಳೆದಿದ್ದಾರೆ. 

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕಾ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ವಿವಿಧ ಇಲಾಖೆಗಳಲ್ಲಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಪ್ರವಾಸಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸಾ.ರಾ.ಮಹೇಶ್ ಪ್ರತಿ ವರ್ಷ ಕೊಡಗಿನಲ್ಲಿ ಪ್ರವಾಸಿ ಉತ್ಸವ ನಡೆಸುವ ಭರವಸೆ ನೀಡಿದರು. ಅತಿವೃಷ್ಟಿಯಿಂದ ಕಂಗೆಟ್ಟಿರುವ ಪ್ರವಾಸೋದ್ಯಮಕ್ಕೆ ಮರುಜೀವ ನೀಡುವ ಮೂಲಕ ಯುವ ಸಮೂಹ ಹಾಗೂ ವರ್ತಕರ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸುವ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ಗಮನ ಸೆಳೆದ ಸಂಗೀತ ಸುಧೆ
ಗಾಂಧಿ ಮೈದಾನದ ವರ್ಣರಂಜಿತ ವೇದಿಕೆಯಲ್ಲಿ ಚುಮು ಚುಮು ಚಳಿಯ ನಡುವೆ ನಡೆದ ವರ್ಣರಂಜಿತ ವಿಭಿನ್ನ ಕಾರ್ಯಕ್ರಮಗಳು ಸಾವಿರಾರು ಪ್ರವಾಸಿಗರ ಹೃದಯ ಗೆದ್ದಿತು. ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ತಂಡದವರ ಸಂಗೀತಸುಧೆಗೆ ಸಭಿಕರು ಭೇಷ್ ಎಂದರು. ಕೊಡಗು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸರಿಗಮಪ ಲಿಟಲ್ ಚಾಂಪ್ಸ್ ಮಕ್ಕಳಾದ ಅಭಿನವ್, ಸುಪ್ರಿಯಾ ಜೋಷಿ, ಆಧ್ಯ, ಜ್ಞಾನೇಶ್, ಕೀರ್ತನಾ, ಪುಟ್ಟರಾಜು ಹೂಗಾರ್ ಇವರಿಂದ ಸಂಗೀತ ಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮಕ್ಕಳಿಂದ ನೃತ್ಯ ವೈಭವ ಕಲಾಪ್ರೇಮಿಗಳ ಗಮನ ಸೆಳೆಯಿತು. ವರ್ಣ ರಂಜಿತ ವಿದ್ಯುತ್ ಅಲಂಕೃತ ವೇದಿಕೆಯ ಆಕರ್ಷಣೆ ಮತ್ತು ಬಣ್ಣ ಬಣ್ಣದ ಸಿಡಿಮದ್ದು ಪ್ರದರ್ಶನ ಮಕ್ಕಳ ಮನಗೆದ್ದಿತು.  

ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಕಾರ್ಯಕ್ರಮ ಮುಗಿಯುವವರೆಗೂ ಸಭಿಕರೊಂದಿಗಿದ್ದು ಗಮನ ಸೆಳೆದರು. 

ಜ.13ರ ಕಾರ್ಯಕ್ರಮ
ಜ.13 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ನಗರದ ರಾಜಾಸೀಟು ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಜರುಗಲಿದೆ.  ಸಂಜೆ 5.30 ರಿಂದ 6.30 ರವರೆಗೆ ಅರೆಭಾಷೆ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30 ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸ ಸಂಜೆ (ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್), ಕಾರ್ಯಕ್ರಮಗಳು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News