ಪರಿಶಿಷ್ಟರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿ: ಶಾಸಕ ಎಸ್.ಟಿ.ಸೋಮಶೇಖರ್

Update: 2019-01-12 15:50 GMT

ಬೆಂಗಳೂರು, ಜ. 12: ಶೋಷಿತ ಸಮುದಾಯ ಸಕ್ರಿಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಚುಂಚನಕುಪ್ಪೆಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಗ್ರಾಮಸ್ಥರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಕೋಲೂರು, ಗಣಪತಿಹಳ್ಳಿ, ಕೇತೋಹಳ್ಳಿ, ಚುಂಚನಕುಪ್ಪೆಹಾಗೂ ಕುರುಬರಹಳ್ಳಿ ರೈತರಿಗೆ ಗಂಗಾಕಲ್ಯಾಣ ಯೋಜನೆಯಡಿ 24 ಫಲಾನುಭವಿಗಳಿಗೆ 15 ಎಚ್.ಪಿ.ಮೋಟಾರ್, ಪೈಪುಗಳು, ಪ್ಯಾನಲ್‌ಬೋರ್ಡ್, ಯುಜಿ ಕೇಬಲ್ ಒಳಗೊಂಡಂತೆ ತಲಾ 4 ಲಕ್ಷ ರೂ ಮೌಲ್ಯದ ಯಂತ್ರೋಪಕರಣಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ನಮ್ಮ ಕ್ಷೇತ್ರದ ಶೋಷಿತ ಸಮುದಾಯವಾದ ಪರಿಶಿಷ್ಟರನ್ನು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಮುಂದಾಗಿದ್ದೇವೆ. ಹೀಗಾಗಿ, 17 ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ವಿದ್ಯುತ್ ಯಂತ್ರೋಪಕರಣ ವಿತರಣೆಗೆ ಮುಂದಾಗಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಅಂಚೇಪಾಳ್ಯದಿಂದ ಕಂಬೀರಪುರದವರೆಗೆ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟಿಸಿದರು. ಕೃಷಿ ವಿವಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್ ಮಾತನಾಡಿ, ಕ್ಷೇತ್ರವ್ಯಾಪ್ತಿಯ ಎಸ್ಸಿ-ಎಸ್ಟಿ ಕಾಲನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಚುಂಚನಕುಪ್ಪೆತಾಲ್ಲೂಕು ಪಂಚಾಯತ್ ಸದಸ್ಯೆ ಚೈತ್ರ, ಗಂಗರೇವಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾಬಲೇಶ್ವರ ಹೆಗಡೆ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News