ಸರಕಾರಿ ನೌಕರನಿಗೆ ಅವಾಚ್ಯವಾಗಿ ನಿಂದಿಸಿದ ಬಿಜೆಪಿ ಶಾಸಕ: ಆರೋಪ

Update: 2019-01-12 16:57 GMT
ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ, ಜ. 12: ಇತ್ತೀಚೆಗಷ್ಟೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ರವರು ಅರಣ್ಯ ಇಲಾಖೆ ಅಧಿಕಾರಿಗೆ ಬೆದರಿಕೆ ಹಾಕುವ ಸ್ವರೂಪದಲ್ಲಿ ಮಾತನಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರರ ಮೇಲೆ ಸರಕಾರಿ ನೌಕರನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ತೀರ್ಥಹಳ್ಳಿಯ ಗ್ರಾಮ ಪಂಚಾಯತ್ ಗ್ರಾಮ ಸಹಾಯಕನೋರ್ವನಿಗೆ ಆರಗ ಜ್ಞಾನೇಂದ್ರರವರು ಅವಾಚ್ಯ, ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಘಟನೆ ವಿವರ: ತೀರ್ಥಹಳ್ಳಿ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ಗ್ರಾಮ ಸಹಾಯಕನೋರ್ವ ಕಳೆದ ಲೋಕಸಭೆ ಉಪ ಚುನಾವಣೆ ವೇಳೆ, ತನ್ನ ಫೇಸ್‍ಬುಕ್ ಸ್ಟೇಟಸ್‍ನಲ್ಲಿ 'ಜೈ ಜೆಡಿಎಸ್' ಎಂಬ ಸಂದೇಶ ಹಾಕಿದ್ದ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತಂತೆ ಜ.10 ರಂದು ತೀರ್ಥಹಳ್ಳಿಯ ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ತಹಶೀಲ್ದಾರ್ ಗೆ ಮನವಿ ಪತ್ರ ಅರ್ಪಿಸಿ ಕಚೇರಿಯಿಂದ ಹಿಂದಿರುಗುವ ವೇಳೆ, ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ನೌಕರನಿಗೂ ಬಿಜೆಪಿ ತಾ.ಪಂ. ಸದಸ್ಯನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಷಯ ತಿಳಿದ ಆರಗ ಜ್ಞಾನೇಂದ್ರರವರು ತಾಲೂಕು ಕಚೇರಿಗೆ ಆಗಮಿಸಿದ್ದರು. ಆಕ್ರೋಶದಿಂದ ನೌಕರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾಯಿಗೆ ಬಂದಂತೆ ಮಾತನಾಡಿದ್ದರು ಎನ್ನಲಾಗಿದ್ದು, ಅವರ ಬೆಂಬಲಿಗರು ಕೂಡ ನೌಕರನ ವಿರುದ್ದ ಏರುಧ್ವನಿಯಲ್ಲಿ ಕೂಗಾಡಿ ತೆರಳಿದ್ದರು ಎಂದು ಆರೋಪಿಸಲಾಗಿದೆ. 

ಈ ಘಟನೆಯ ವಿವರ ಪಡೆದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ರವರು ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದಾರೆ. ನೌಕರನಿಗೆ ಬೆಂಬಲವಾಗಿ ನಿಂತು ಆರಗ ಜ್ಞಾನೆಂದ್ರರ ವರ್ತನೆ ಖಂಡಿಸಿದ್ದರು. ಪ್ರಕರಣದ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ನೌಕರನಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. 

ಮತ್ತೊಂದು ವೀಡಿಯೋ: ಈ ನಡುವೆ ಆರಗ ಜ್ಞಾನೇಂದ್ರರವರ ಮತ್ತೊಂದು ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಅವರು ಕ್ಷೇತ್ರದ ಗ್ರಾ.ಪಂ. ಪಿಡಿಓರವರಿಗೆ ಮೊಬೈಲ್ ಪೋನ್‍ನಲ್ಲಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. 'ರ‌್ಯಾಸ್ಕಲ್...ಮಾನ ಮರ್ಯಾದೆಯಿದೆಯಾ ನಿನಗೆ. ನೀನು ಪಿಡಿಓನಾ. ಯೋಗ್ಯತೆಯಿದೆಯಾ ನಿನಗೆ..!' ಎಂದೆಲ್ಲ ಕೂಗಾಡಿದ್ದರೆನ್ನಲಾಗಿದ್ದು, ಈ ವೀಡಿಯೋ ಕೂಡ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಟ್ಟಾರೆ ಜಿಲ್ಲೆಯ ಶಾಸಕರು ಸರ್ಕಾರಿ ಅಧಿಕಾರಿ - ನೌಕರರ ವಿರುದ್ಧ ಸಾರ್ವಜನಿಕವಾಗಿ ನಾಲಗೆ ಹರಿಬಿಡುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News