ಶಿವಮೊಗ್ಗ-ಶೃಂಗೇರಿ ರೈಲ್ವೆ ಯೋಜನೆ ಜಾರಿಗೆ ಕೇಂದ್ರಕ್ಕೆ ಸಿಎಂ ಪತ್ರ: ಗರಿಗೆದರಿದ ಮಲೆನಾಡಿಗರ ದಶಕಗಳ ಕನಸು

Update: 2019-01-12 17:00 GMT

ಚಿಕ್ಕಮಗಳೂರು, ಜ.12: ರಾಜ್ಯದ ಪ್ರಮುಖ ಯಾತ್ರಾಸ್ಥಳವಾಗಿರುವ ಶೃಂಗೇರಿ ಪಟ್ಟಣಕ್ಕೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲಾಕೇಂದ್ರಗಳಿಂದ ರೈಲು ಸಂಪರ್ಕ ಸೇವೆ ಕಲ್ಪಿಸಬೇಕೆಂದು ಮಲೆನಾಡಿನ ಜನತೆ ದಶಕಗಳ ಹಿಂದೆ ಸಂಬಂಧಿಸಿದ ಸಚಿವರು, ಸರಕಾರಗಳ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಮಲೆನಾಡಿಗರ ಈ ದಶಕಗಳ ಕನಸು ಇದೀಗ ಗರಿಗೆದರಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಈ ಯೋಜನೆ ಜಾರಿಗೆ ಒತ್ತಾಯಿಸಿ ಕೇಂದ್ರದ ರೈಲ್ವೆ ಸಚಿವರಿಗೆ ಇತೀಚಿಗೆ ಪತ್ರ ಬರೆದಿರುವುದರಿಂದ ಈ ಯೋಜನೆ ಜಾರಿ ಬಗ್ಗೆ ಮಲೆನಾಡಿನಲ್ಲಿ ಭರವಸೆ ವ್ಯಕ್ತವಾಗುತ್ತಿದೆ.

ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಶೃಂಗೇರಿ ಪಟ್ಟಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಜಾರಿ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ಡಿ.27ರಂದು ಕೇಂದ್ರದ ರೈಲ್ವೆ ಸಚಿವ ಪಿಯೂಸ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದು, ಈ ಸುದ್ದಿ ಇದೀಗ ಮಲೆನಾಡಿನಲ್ಲಿ ಸಂಚಲನ ಮೂಡಿಸಿದ್ದು, ಕೇಂದ್ರದ ರೈಲ್ವೆ ಮಂಡಳಿ ಇದಕ್ಕೆ ಹಸಿರು ನಿಶಾನೆ ತೋರಿದಲ್ಲಿ ಮಲೆನಾಡಿಗರ ದಶಕಗಳ ಬೇಡಿಕೆ ಈಡೇರಿದಂತಾಗುತ್ತದೆ.

"ಶೃಂಗೇರಿ ಮಠವು ದೇಶದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾಗಿದ್ದು, ಲಕ್ಷಾಂತರ ಯಾತ್ರಾರ್ಥಿಗಳು ಶೃಂಗೇರಿ ಮಠದ ದರ್ಶನಕ್ಕೆ ದೇಶದ ವಿವಿಧ ರಾಜ್ಯಗಳಿಂದ ಪ್ರತಿದಿನ ಆಗಮಿಸುತ್ತಿದ್ದಾರೆ. ಈ ಯಾತ್ರಿಗಳಿಗೆ ಸುಗಮ ಸಾರಿಗೆ ಕಲ್ಪಿಸಲು ಪಟ್ಟಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 2017-18ನೇ ಸಾಲಿನಲ್ಲಿ ರಾಜ್ಯ ಸರಕಾರ ರೈಲ್ವೆ ಯೋಜನೆ ಸಂಬಂಧ ಶಿವಮೊಗ್ಗದಿಂದ ಶೃಂಗೇರಿ ರೈಲು ಮಾರ್ಗದ ಸರ್ವೇಗೆ ಅನುಮತಿ ನೀಡಿದ್ದು, 2018-19ರ ಸಾಲಿನಲ್ಲೂ ಈ ಸರ್ವೇ ಕಾರ್ಯಕ್ಕೆ ಅನುಮತಿ ನೀಡಲಾಗಿದೆ. 2014-15ನೇ ಸಾಲಿನಲ್ಲಿ ಶೃಂಗೇರಿ ಮಾರ್ಗವಾಗಿ ಶಿವಮೊಗ್ಗ-ಮಂಗಳೂರು ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಮಂಜೂರಾಗಿದೆ. ಇದರ ಸರ್ವೇ ವರದಿ ಸದ್ಯ ಪೂರ್ಣಗೊಂಡಿದ್ದು, ವರದಿಯನ್ನು ಕೇಂದ್ರ ರೈಲ್ವೆ ಮಂಡಳಿಗೆ ಕಳಿಸಲಾಗಿದೆ" ಎಂದು ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಹಾಸನ-ಸಕಲೆಶಪುರ- ಬೇಲೂರು, ಮೂಡಿಗೆರೆ-ಚಿಕ್ಕಮಗಳೂರು ಮಾರ್ಗವಾಗಿ ಶೃಂಗೇರಿ ಪಟ್ಟಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಈ ಹಿಂದೆಯೇ ಕೇಂದ್ರ ಸರಕಾರವನ್ನು ತಲುಪಿತ್ತು. ಕೇಂದ್ರದ ರೈಲ್ವೆ ಮಂಡಳಿ ಚಿಕ್ಕಮಗಳೂರು-ಮೂಡಿಗೆರೆ-ಬೇಲೂರು ಮಾರ್ಗವಾಗಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಸರ್ವೇಗೆ ಈಗಾಗಲೇ ಸೂಚಿಸಿತ್ತು. ಆದರೆ ಮೂಡಿಗೆರೆ ಮೂಲಕ ಸಂಪರ್ಕ ತಾಂತ್ರಿಕವಾಗಿ ಅಸಾಧ್ಯ ಎಂಬ ಕಾರಣದಿಂದ ಅದು ನೆನೆಗುದಿಗೆ ಬಿದ್ದಿದೆ. ಆದರೆ ಚಿಕ್ಕಮಗಳೂರು ಬೇಲೂರು ಮಾರ್ಗವಾಗಿ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಮಾತ್ರ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಅಡಿಗಲ್ಲು ಬಿದ್ದಿದ್ದು, ಇದನ್ನು ಕೇಂದ್ರ- ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ. 

ಸದ್ಯ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಶಿವಮೊಗ್ಗದಿಂದ ಶೃಂಗೇರಿ ಪಟ್ಟಣ ಸಂಪರ್ಕಿಸುವ ರೈಲ್ವೆ ಮಾರ್ಗದ ಸರ್ವೇಗೆ ಅನುಮತಿ ನೀಡಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿರುವುದು ಮಲೆನಾಡಿನ ಜನತೆಯಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಅವರ ಕುಟುಂಬದವರು ಶೃಂಗೇರಿ ಮಠದ ಕಟ್ಟಾ ಅನುಯಾಯಿಗಳಾಗಿರುವುದರಿಂದ ದೇವೇಗೌಡ ಅವರ ಪ್ರಯತ್ನದಿಂದಾಗಿ ಕುಮಾರಸ್ವಾಮಿ ಸರಕಾರ ಈ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಶೃಂಗೇರಿ ಮಠದ ಮೇಲೆ ಅಪಾರ ಗೌರವ ಹೊಂದಿರುವ ದೇವೇಗೌಡ ಅವರಿಂದಾಗಿ ಈ ಯೋಜನೆ ಜಾರಿಯಾಗುವುದು ಖಚಿತ ಎಂದು ಮಲೆನಾಡಿನ ಜನತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News