ಮಲೆನಾಡಿನ ಕಲಾ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕಿದೆ: ಸಾಹಿತಿ ನಾಗರಾಜರಾವ್

Update: 2019-01-12 17:05 GMT

ಶೃಂಗೇರಿ, ಜ.12: ಮಲೆನಾಡಿನ ಶ್ರೇಷ್ಠ ಸಾಹಿತಿಗಳ ವಿಶಿಷ್ಟ ಸಣ್ಣ ಕಥೆಗಳ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಬಿ.ಎಲ್.ರವಿಕುಮಾರ್ ಮಲೆನಾಡಿನ ಒಬ್ಬ ಶ್ರೇಷ್ಠ ರಂಗಕಲಾವಿದರಾಗಿದ್ದಾರೆ. ಇಂತಹ ಎಲೆ ಮರೆಯ ಪ್ರತಿಭೆಗಳ ಸಾಧನೆಯನ್ನು ದಾಖಲೀಕರಿಸುವ ಮೂಲಕ ಮುಂದಿನ ತಲೆಮಾರಿನ ಯುವಕರಿಗೆ ದಾರಿದೀಪವಾಗಿಸಬೇಕಾದ ಸಾಂಸ್ಕೃತಿಕ ತುರ್ತು ನಮ್ಮೆದುರು ಇದೆ ಎಂದು ಸಾಹಿತಿ ಎಚ್.ಎಂನಾಗರಾಜರಾವ್ ಕಲ್ಕಟ್ಟೆ ತಿಳಿಸಿದ್ದಾರೆ.

ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಮಲೆನಾಡು ಉತ್ಸವ ಕಾರ್ಯಕ್ರಮದಲ್ಲಿ ಹಿರಿಯ ರಂಗನಟ ಬಿ.ಎಲ್ ರವಿಕುಮಾರ್ ಇವರ ರಂಗಾಭಿನಂದನೆಯ ಸಂದರ್ಭ ಅಭಿನಂದನಾ ಭಾಷಣ ಮಾಡಿದ ಅವರು, ಯಾವುದೇ ವಯಸ್ಸಿನ ಹಂಗಿಲ್ಲದೆ ವಿವಿಧ ರೀತಿಯ ಪಾತ್ರವನ್ನು ನಿರ್ವಹಿಸಿದ ಕೀರ್ತಿ ರವಿಕುಮಾರ್ ಅವರದ್ದು. ಸಿ.ಆರ್.ಸಿಂಹ ಅವರ ಕರ್ಣ ಮತ್ತು ಭಾಸಮಹಾಕವಿಯ ಕರ್ಣಭಾರ ನಾಟಕದಲ್ಲಿ ಕರ್ಣನ ಪಾತ್ರಕ್ಕೆ ರಾಜ್ಯಮಟ್ಟದ ಹೆಸರನ್ನು ಪಡೆದು ಪ್ರತಿಭೆ ಮೆರೆದಿದ್ದಾರೆ ಎಂದು ನಾಗರಾಜ್‍ರಾವ್ ತಿಳಿಸಿದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರವಿಕುಮಾರ್, ಶೃಂಗೇರಿಯ ಸಾಂಸ್ಕೃತಿಕ ವಲಯ ಹೆಚ್ಚು ಶ್ರೀಮಂತವಾದ ಕಾರಣಕ್ಕೆ ನನ್ನಂತಹ ಕಲಾವಿದರು ಬೆಳೆಯಲು ಸಾಧ್ಯವಾಗಿದೆ. ಮಲೆನಾಡಿನ ಸಾಂಸ್ಕೃತಿಕ ಹೆಗ್ಗುರುತು ಶೃಂಗೇರಿಯಾಗಿದ್ದು, ಈ ಊರನ್ನು ನನ್ನ ರಂಗಭೂಮಿಯ ಕರ್ಮಕ್ಷೇತ್ರವನ್ನಾಗಿಸಿಕೊಳ್ಳಲು ಹೆಮ್ಮೆ ಇದೆ. ರಮೇಶ್ ಬೇಗಾರ್ ನೇತೃತ್ವದಲ್ಲಿ ಮಲೆನಾಡ ಕಲಾವಿದರಿಗೆ ಅಸ್ತಿತ್ವರೂಪುಗೊಳ್ಳುತ್ತಿರುವುದು ಸ್ವಾಗತಾರ್ಹ ಕೆಲಸವಾಗಿದೆ. ಮತ್ತಷ್ಟು ರಂಗಭೂಮಿ ಕೆಲಸವನ್ನು ನಿರ್ವಹಿಸಲು ಈ ಅಭಿನಂದನೆ ನನಗೆ ಎಚ್ಚರಿಕೆಯ ಕರೆಗಂಟೆ ಎಂದು ತಿಳಿಸಿದರು.

ಜಿ.ಪಂ ಸದಸ್ಯ ಬಿ. ಶಿವಶಂಕರ್ ಮಾತನಾಡಿದರು. ಈ ಸಂದರ್ಭ ಪ್ರಗತಿಪರ ಕೃಷಿಕ ಕೌರಿ ಪ್ರಕಾಶ್ ಇವರಿಗೆ ಕಲ್ಕುಳಿ ದೇವೇಂದ್ರ ಹೆಗಡೆ ಕೃಷಿ ಪ್ರಶಸ್ತಿ, ಉಡುಪಿಯ ಸಮಾಜ ಸೇವಕ ಪ್ರಫುಲ್ಲಚಂದ್ರರಾವ್‍ಗೆ ಎಲ್.ಎಂ.ಭಟ್ ಸ್ಮಾರಕ ಸದ್ಭಾವನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೃಷಿ ಪ್ರಶಸ್ತಿ ಸ್ವೀಕರಿಸಿದ ಕೌರಿ ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಜನತೆ ಕೃಷಿಯನ್ನು ಅಪ್ಪಿಕೊಂಡು ಆ ವಿಭಾಗದಲ್ಲಿ ತನ್ಮಯರಾಗಿ ದೇಶದ ಬೆನ್ನೆಲುಬಾಗಿರುವ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಬೇಕು. ಇಂತಹ ಪ್ರೇರಣೆಗೆ ಮಲೆನಾಡು ಉತ್ಸವದ ಸಾಕ್ಷಿಯಾಗುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಸಮಾರಂಭದಲ್ಲಿ ಉತ್ಸವ ಸಂಚಾಲಕ ಎಸ್.ಎನ್ ವಿಶ್ವನಾಥ್ ಸಂಘಟಕ ರಮೇಶ್ ಬೇಗಾರ್, ಎ.ಎಸ್. ನಯನ, ಟಿ.ಕೆ.ಪರಾಷರ ಉಪಸ್ಥಿತರಿದ್ದರು. ಎಂ.ಕೆ.ಶ್ರೀನಿಧಿಯವರ ಸಂಯೋಜನೆಯಲ್ಲಿ ನಾಡಿನ ಹೆಸರಾಂತ ಜಾನಪದ ಗಾಯಕ ಅಬ್ಬಗೆರೆ ತಿಮ್ಮರಾಜು ಮತ್ತು ಸ್ಥಳೀಯ ಪ್ರತಿಭೆ ಭಾಗ್ಯಶ್ರೀಗೌಡ ಜಾನಪದ ಗೀತೆಗಳಿಂದ ಸೇರಿದ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದರು. ತಿಮ್ಮರಾಜು ಸೂಕ್ತ ವಿವರಣೆಯೊಂದಿಗೆ ಅಭಿನಯ ಸಹಿತ ಪ್ರಸ್ತುತಪಡಿಸಿದ ಗೀತೆಗಳು ಜಾನಪದದ ಕೇಳುಗರಿಗೆ ವಿರಾಟ್ ದರ್ಶನ ಮಾಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News