ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ, ಸತ್ಯಪಂಥೀಯ: ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ

Update: 2019-01-12 17:15 GMT

ಮೈಸೂರು,ಜ.12: ಸಜ್ಜನರ ಮೌನವೇ ದುರ್ಜನರ ಘರ್ಜನೆಗೆ ಅವಕಾಶ ಮಾಡಿಕೊಡಲಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಘಣದಲ್ಲಿ ಶನಿವಾರ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಡ್ಯ ಜಿಲ್ಲಾ ಘಟಕದ ಸಹಯೋಗದಲ್ಲಿ 'ರಾಮಮಂದಿರ ಮತ್ತು ಸುಗ್ರೀವಾಜ್ಞೆ ಸಾಧ್ಯತೆ' ಒಂದು ಅವಲೋಕನ ಕೃತಿ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ, ಸತ್ಯಪಂಥೀಯ. ಕಠೋರ ಮತ್ತು ನಿಷ್ಠುರ. ಯಾರು ಏನೇ ಹೇಳಿದರೂ ನನಗನಿಸಿದ್ದನ್ನು ನಾನು ನಿರ್ಭಯವಾಗಿ ಹೇಳಿಕೊಂಡು ಬಂದಿದ್ದೇನೆ. ಈ ಕೃತಿಯಲ್ಲಿ ಅತ್ಯಂತ ವಸ್ತು ನಿಷ್ಠವಾಗಿ ರಾಮಮಂದಿರದ ನಿರ್ಮಾಣ ಅಗತ್ಯವಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.

ಪುರಾಣಗಳ ಪ್ರಕಾರ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ರಾಮಜನ್ಮಭೂಮಿಯಿದ್ದ ಬಗ್ಗೆ ಸ್ಪಷ್ಟ ನಿದರ್ಶನಗಳಿವೆ. ಮುಸ್ಲಿಂ ರಾಜರುಗಳು ದಾಳಿ ಹಿಂದೂ ದೇವಾಲಯಗಳ ಮೇಲೆ ನಡೆದಿದೆ. ಅದನ್ನು ನೋಡಲು ಅಯೋಧ್ಯೆಗೆ ಹೋಗಬೇಕಿಲ್ಲ. ಶ್ರೀರಂಗಪಟ್ಟಣದಲ್ಲಿ ಹಿಂದೂ ದೇವಾಲಯ ಕೆಡವಿ ಅದರ ಮೇಲೆಯೇ ಟಿಪ್ಪು ಮಸೀದಿಯನ್ನು ಕಟ್ಟಿದ್ದ. ಹಿಂದೂ ದೇವಾಲಯಗಳನ್ನು ನಾಶಮಾಡುತ್ತಾ ಬಂದ ಎಂದರು.

ಪ್ರಜಾವಾತ್ಸಲ್ಯಕ್ಕೆ, ಭ್ರಾತೃತ್ವಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರ ಪ್ರತೀಕ ಶ್ರೀರಾಮ. ಆತನ ಪತ್ನಿ ಸೀತಾಮಾತೆ ಕೂಡ ಸೌಮ್ಯ, ಪತಿವೃತೆ. ಆದರೆ ಇತ್ತೀಚೆಗೆ ಲೇಖಕ ಭಗವಾನ್ ಶ್ರೀರಾಮ ಹೆಂಡ ಕುಡಿತಿದ್ದ ಅಂತೆಲ್ಲ ಹೇಳಿಕೆ ಕೊಟ್ಟು ಪುಸ್ತಕ ಬರೆದರು. ಅದು ವಿವಾದಕ್ಕೆ ಕಾರಣವಾಯಿತು. ಪೊಲೀಸರು ಕ್ರಮ ಕೈಗೊಂಡರು. ರಕ್ಷಣೆ ನೀಡಿದರು. ಅವರಿಗೆ ಭಗವಾನ್ ಎಂದು ಯಾಕೆ ಹೆಸರಿಟ್ಟರೋ ಗೊತ್ತಿಲ್ಲ. ಬಹುಶಃ ಹೆಸರಿಟ್ಟವರಿಗೆ ದುಃಖವಾಗಿರಬೇಕು. ಗೌರವಿಸುವಂತಹವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಗೌರವಿಸದಿದ್ದಲ್ಲಿ ಅದನ್ನು ವಿರೋಧಿಸಬೇಕು. ಸಜ್ಜನರ ಮೌನವೇ ದುರ್ಜನರ ಘರ್ಜನೆಗೆ ಅವಕಾಶ ಮಾಡಿಕೊಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಶಾಖಾ ಮಠದ ಶ್ರೀಸೋಮೇಶ್ವರನಾಥ್ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸಂಘ ಚಾಲಕ ಮಾ.ವೆಂಕಟರಾಮ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಅಡ್ಡಾಂಡ ಕಾರ್ಯಪ್ಪ, ವಕೀಲ ಪಿ.ಕೃಷ್ಣಮೂರ್ತಿ, ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ, ಸಾಹಿತಿ ಡಾ.ಹನಿಯೂರು ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News