ಸಂಕಟ-ಸಂಕಷ್ಟ ಎದುರಿಸುವ ಮಾದರಿಗಳನ್ನು ಸೃಷ್ಟಿಸುವ ಶಕ್ತಿ ರಂಗಭೂಮಿಗಿದೆ: ರಂಗಕರ್ಮಿ ಪ್ರಸನ್ನ

Update: 2019-01-12 17:28 GMT

ಮೈಸೂರು,ಜ.12: ಸಂಕಟ ಮತ್ತು ಸಂಕಷ್ಟಗಳನ್ನು ಎದುರಿಸುವ ಮಾದರಿಗಳನ್ನು ಸೃಷ್ಟಿಸಬಲ್ಲ ಶಕ್ತಿ ರಂಗಭೂಮಿಗಿದೆ ಎಂದು ಖ್ಯಾತ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಹೇಳಿದರು.

ಕಲಾಮಂದಿರದ ರಂಗಾಯಣ ಆವರಣದಲ್ಲಿ ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಸಭ್ಯತೆ ಸಂಕಟದಲ್ಲಿದೆ. ಅದನ್ನು ಎಲ್ಲರೂ ಅನುಭವಿಸುತ್ತಿದ್ದೇವೆ. ವಿಜ್ಞಾನಿಗಳು, ತತ್ವಜ್ಞಾನಿಗಳು ಮಾನವ ಸಭ್ಯತೆ ಉಳಿಯುತ್ತೋ ಇಲ್ಲವೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮಾನವ ಸಭ್ಯತೆ 200-300 ವರ್ಷಗಳೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ನುಡಿದರು.  

ಶ್ರೀರಂಗ, ಕೈಲಾಸಂ ಮತ್ತು ಕುವೆಂಪು ಅವರ ಕಾಲದ ಸಂಕಟಗಳಿಕ್ಕಿಂತ ಗಟ್ಟಿಯಾದ ಸಂಕಟವನ್ನು ನಾವು ಎದುರಿಸುತ್ತಿದ್ದೇವೆ. ಸಂಕಟಗಳ ನಡುವಿನಿಂದಲೇ ಹೊಸ ಬದುಕು ಸೃಷ್ಟಿಯಾಗುತ್ತದೆ. ಸಂಕಷ್ಟವನ್ನು ಎದುರಿಸುವ ಮಾದರಿಗಳನ್ನು ಸೃಷ್ಟಿಸಬಲ್ಲ ಶಕ್ತಿ ರಂಗಭೂಮಿಗಿದೆ ಎಂದು ಹೇಳಿದರು. ಶ್ರಮದಿಂದ ಬದುಕುವುದೇ ಸಹಜ ಬದುಕು. ನಿಸರ್ಗ, ಪ್ರಾಣಿಗಳಿಗೆ ಶ್ರಮದಾಚೆಗಿನ ಬದುಕಿಲ್ಲ. ಯಂತ್ರಗಳ ಸುಲಭ ಬದುಕಿನ ಮೊರೆ ಹೋಗಿರುವ ಮನುಷ್ಯರು ಶೂದ್ರತ್ವ ಸ್ವೀಕರಿಸಬೇಕು ಎಂದು ತಿಳಿಸಿದರು. 

ಶೂದ್ರರಾಗುವುದೆಂದರೆ ಶ್ರಮ ಸಂಸ್ಕೃತಿಯಿಂದ ಬದುಕುವುದು. ಶ್ರಮದ ಬದುಕೇ ಧರ್ಮ ಎಂದ ಅವರು, ನಮ್ಮ ವಚನಕಾರರು, ಸಂತರಾದ ಕಬೀರ ಮಗ್ಗದಲ್ಲಿ ನೇಯುತ್ತ ರವಿದಾಸ ಚಪ್ಪಲಿ ಹೊಲೆಯುತ್ತಲೇ ಧರ್ಮ ಪ್ರಸಾರ ಮಾಡಿದರು. ವೈದಿಕತೆಯಲ್ಲಿ ಸಿಲುಕಿರುವ ದೇವರನ್ನು ಎಳೆದು ತಂದು ಶೂದ್ರ ಪರಂಪರೆಗೆ ಸೇರಿಸಬೇಕು ಎಂದು ನುಡಿದರು. 

ಕಲೆ ಹುಟ್ಟಿದ್ದು ಧರ್ಮ ಸಂರಕ್ಷಣೆಗಾಗಿಯೇ. ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಜಾನಪದ ನಾಟಕ ನಡೆಯೋದು ಧರ್ಮ ಸಾಕ್ಷತಾರಕ್ಕಾಗಿಯೇ. ರಂಗಭೂಮಿ ಜವಾಬ್ದಾರಿ ಧರ್ಮ ಸಂರಕ್ಷಣೆಯಾಗಿದೆ. ರಂಗಭೂಮಿ ಶೂದ್ರತ್ವ ಸ್ವೀಕರಿಸಿ ನಾಟಕ ಆಡಬೇಕು. ನಾಟಕಗಳು ಹೆಚ್ಚು ಸರಳವಾಗಿರಬೇಕು. ಸಂಕಟವನ್ನು ಬೊಟ್ಟು ಮಾಡಿ ತೋರಿಸಬೇಕು ಎಂದು ಹೇಳಿದರು. ಕನ್ನಡ ರಂಗಭೂಮಿ ಕಳೆದ ಹಲವು ದಶಕಗಳಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ. ಆರಂಭದಲ್ಲಿ ಮನರಂಜನೆ ಮಾಧ್ಯಮವಾಗಿದ್ದ ರಂಗಭೂಮಿ ಸಾಮಾಜಿಕ ಕ್ಷೇತ್ರವನ್ನು ಪ್ರವೇಶಿಸಿ ಮಹತ್ತರ ಕೆಲಸವನ್ನು ಮಾಡಿದೆ. ರಂಗಾಯಣಕ್ಕೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದು ತಿಳಿಸಿದರು.

ರಂಗಾಯಣದ ನಿರ್ದೇಶಕಿ ಭಾಗಿರಥಿ ಬಾಯಿ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ರಂಗತಜ್ಞರಾದ ಕೀರ್ತಿ ಜೈನ್, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ನಗರ ಪಾಲಿಕೆ ಆಯುಕ್ತ ಕೆ.ಜೆ.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ, ಬಹುರೂಪಿ 2019ರ ಪ್ರಧಾನ ಸಂಚಾಲಕ ಮಹದೇವ್ ಉಪಸ್ಥಿತರಿದ್ದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು. ಸಾಹಿತಿ ಡಾ.ಸಿ.ನಾಗಣ್ಣ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News