ಕುಣಿಗಲ್ ಟಿಬಿಸಿಗೆ ಡಿಕೆ ಶಿವಕುಮಾರ್ ಭೇಟಿ: ನಾಲೆ ಸಮಸ್ಯೆ ಖುದ್ದು ಪರಿಶೀಲನೆ

Update: 2019-01-12 17:41 GMT

ತುಮಕೂರು, ಜ.12: ಹೇಮಾವತಿ ಜಲಾಶಯದಿಂದ ತುಮಕೂರಿನ 9 ತಾಲೂಕುಗಳಿಗೆ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ನೀರು ಪೂರೈಸುವ ತುಮಕೂರು ಶಾಖಾ ನಾಲೆ (ಟಿಬಿಸಿ) ಆಧುನೀಕರಣಕ್ಕೆ ಪೂರ್ವಭಾವಿಯಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಕುಣಿಗಲ್ ನಡುವಣ ಮಾಕನಹಳ್ಳಿಗೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಜತೆ ಭೇಟಿ ನೀಡಿದ್ದ ಸಚಿವರು, ನಾಲೆಯಲ್ಲಿ ನೀರು ಹರಿಯಲು ಇರುವ ಸಮಸ್ಯೆಗಳ ಬಗ್ಗೆ ವಿವರ ಪಡೆದರು.

ಯೋಜನೆಯಂಚಿನ ಕುಣಿಗಲ್ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ರಂಗನಾಥ್ ಮತ್ತಿತರ ಸ್ಥಳೀಯ ಜನ ಪ್ರತಿನಿಧಿಗಳು, ನಾಲೆಯಲ್ಲಿ ನೀರು ಹರಿಯುತ್ತಿಲ್ಲ ಎಂದು ದೂರಿದ ಹಿನ್ನೆಲೆಯಲ್ಲಿ ಅದಕ್ಕಿರುವ ಅಡ್ಡಿ-ಆತಂಕಗಳ ಪರಿಶೀಲನೆಗೆ ಸಚಿವರು ಈ ಭೇಟಿ ನೀಡಿದ್ದರು.

ತುಮಕೂರಿನ ಒಂಬತ್ತು ತಾಲೂಕಿನ 1.68 ಲಕ್ಷ ಎಕರೆ ಕೃಷಿ ಭೂಮಿ ಹಾಗೂ ಕುಡಿಯುವ ಉದ್ದೇಶಕ್ಕೆ 6 ಟಿಎಂಸಿ ನೀರು ಒದಗಿಸುವ ಟಿಬಿಸಿ ಒಟ್ಟು 240 ಕಿ.ಮೀ. ಉದ್ದವಿದ್ದು, ಕುಸಿಯುವ ಹಾಗೂ ಗಟ್ಟಿ ಹೂಳಾಗುವ ಮಣ್ಣಿನ ಗುಣದಿಂದಾಗಿ ಕುಣಿಗಲ್ ತಾಲೂಕಿಗೆ ಸಮರ್ಪಕ ನೀರು ಪೂರೈಕೆಗೆ ತೊಡಕಾಗಿ ಪರಿಣಮಿಸಿದೆ. ಮಾಕನಹಳ್ಳಿ ಬಳಿ ಸುಮಾರು ಐದು ಕಿ.ಮೀ. ಉದ್ದದವರೆಗೂ 25 ರಿಂದ 30 ಮೀಟರ್ ಆಳವಿದ್ದು, ಕುರುಚಲು-ಕಳೆಗಿಡಗಳಿಂದ ಆವೃತವಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದೆ.

ಈ ಸಮಸ್ಯೆಯಿಂದ ನಾಲೆಯಂಚಿನ ಕುಣಿಗಲ್ ತಾಲೂಕಿನ ಜನ ನೀರಿನ ಬವಣೆ ಎದುರಿಸುತ್ತಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ 475 ಕೋಟಿ ರುಪಾಯಿ ವೆಚ್ಚದಲ್ಲಿ 70 ಕಿ.ಮೀ ಹಾಗೂ ಎರಡನೇ ಹಂತದಲ್ಲಿ 615 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪರ್ಕ ನಾಲೆಗಳನ್ನು ಆಧುನೀಕರಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ತಾಲೂಕಿನ ಕುಡಿಯುವ ಹಾಗೂ ಕೃಷಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಜತೆಗೆ ಕುಣಿಗಲ್ ನ 19 ಹಾಗೂ ಮಾಗಡಿಯ 64 ಕೆರೆಗಳನ್ನು ತುಂಬಿಸಲು ಅನುಕೂಲ ವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News