ಒತ್ತುವರಿಯಾದ ಕೆರೆಗಳನ್ನು ಯಾರ ಮುಲಾಜಿಗೂ ಒಳಗಾಗದೆ ತೆರವುಗೊಳಿಸುವೆ: ಸಚಿವ ಸಿ.ಎಸ್.ಪುಟ್ಟರಾಜು

Update: 2019-01-12 18:06 GMT

ಪಾಂಡವಪುರ,ಜ.12: ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಲೀ ಯಾವುದೇ ಮುಲಾಜಿಗೂ ಒಳಗಾಗದೇ ಕೆರೆ ಒತ್ತುವರಿಗಳನ್ನು ತೆರವುಗೊಳಿಸುವೆ ಎಂದು ಸಣ್ಣ ನೀರಾವರಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ಗ್ರಾ.ಪಂ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 'ಜನಸಂಪರ್ಕ ಸಭೆ’ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ಒತ್ತುವರಿ ತೆರವುಗೊಳಿಸುವ ಮೂಲಕ ರೈತರು ಹಾಗೂ ಜಾನುವಾರುಗಳಿಗೆ ನೀರೊದಗಿಸುವ ಕೆಲಸ ಮಾಡುವೆ ಎಂದರು.

ಸಣ್ಣ ನೀರಾವರಿ ಸಚಿವನಾಗಿರುವ ತಾನು ರಾಜ್ಯದಲ್ಲಿ ಕೆರೆಗಳನ್ನು ಉಳಿಸಲು ಬದ್ಧನಿದ್ದೇನೆ. ಜೊತೆಗೆ ಕೆರೆಗಳ ಸಂರಕ್ಷಣೆ ಮಾಡಿ, ಅಂತರ್ಜಲ ವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಹೊಸ ರೂಪದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೊಳಿಸಲಾಗುವುದು. ಕುರಹಟ್ಟಿ ಬಳಿ ವಿ.ಸಿ ನಾಲೆಗೆ ಚೆಕ್‍ಡ್ಯಾಮ್ ನಿರ್ಮಿಸಿ ಏತನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಕೆಂಗಲ್ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಆರ್ಚ್ ವ್ಯವಸ್ಥೆ, ಆರೋಗ್ಯ ಕೇಂದ್ರ ಸ್ಥಾಪನೆ, ಹಾಸ್ಟೆಲ್ ವ್ಯವಸ್ಥೆ, ಜಾಗ ನೀಡಿದರೆ ಸುಂಕಾತೊಣ್ಣೂರು ಗ್ರಾಮದಲ್ಲಿ ವಿದ್ಯುತ್ ಉಪ ವಿತರಣಾ ಕೇಂದ್ರ ಸ್ಥಾಪನೆ, ಸುಂಕಾತೊಣ್ಣೂರು ಗ್ರಾಮದಲ್ಲಿ ನಾಡ ಕಚೇರಿ ಆರಂಭಿಸುವ ಜತೆಗೆ ಈ ಭಾಗದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ನನಗೆ ಮತ ನೀಡಿ ಗೆಲ್ಲಿಸಿ ಇಂದು ಸಚಿವನಾಗಿ ಮಾಡಿದ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಕ್ಷೇತ್ರವನ್ನು ಎಲ್ಲಾ ರೀತಿಯಲ್ಲಿಯೂ ಅಭಿವೃದ್ದಿಪಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಾಗಿದೆ. ಆದ್ದರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಜನಸಂಪರ್ಕ ಸಭೆಗಳನ್ನು ಏರ್ಪಡಿಸಿ ಅಧಿಕಾರಿಗಳನ್ನು ಜನರ ಬಳಿಯೇ ಕರೆ ತಂದು ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಕೊನೆ ಶನಿವಾರ ಎರಡು ಗ್ರಾಪಂಗಳಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ ಜನರ ಸಮಸ್ಯೆ, ಕುಂದು ಕೊರತೆಗಳನ್ನು ಬಗೆಹರಿಸಲಾಗುವುದು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ರೈತರು ಹಾಗೂ ಸಾರ್ವಜನಿಕರನ್ನು ಸುಮ್ಮನೆ ಕಚೇರಿಗೆ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮಾತನಾಡಿ, ರಾಜ್ಯ ಸರ್ಕಾರ 65 ವರ್ಷ ಮೇಲ್ಪಟ್ಟ ವಯೋವೃದ್ದರಿಗೆ ತಿಂಗಳ ಮಾಸಾಶನ 600 ರೂ.ಗಳಿಂದ 1 ಸಾವಿರಕ್ಕೆ ಹೆಚ್ಚಿಸಿದೆ. ಪಿಂಚಣಿ ಸೌಲಭ್ಯಕ್ಕಾಗಿ ವಯೋವೃದ್ದರು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು. 

ಇದೇ ವೇಳೆ ಸಾಮಾಜಿಕ ಭದ್ರತೆ ಫಲಾನುಭವಿಗಳಿಗೆ ಸಚಿವ ಸಿ.ಎಸ್.ಪುಟ್ಟರಾಜು ಪ್ರಮಾಣ ಪತ್ರವನ್ನು ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಗಾಯಿತ್ರಿನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಜಿ.ಪಂ ಸದಸ್ಯ ಎಚ್.ತ್ಯಾಗರಾಜು, ತಾ.ಪಂ ಅಧ್ಯಕ್ಷೆ ಸುಮಲತಾ ಎನ್.ಜೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪುಟ್ಟೇಗೌಡ, ಸದಸ್ಯೆ ಎಚ್.ಸಿ.ಶೋಭಾ, ಎಪಿಎಂಸಿ ಅಧ್ಯಕ್ಷ ಕುಳ್ಳೇಗೌಡ, ನಿರ್ದೇಶಕ ದೇವೇಗೌಡ, ತಹಶೀಲ್ದಾರ್ ಎಂ.ವಿ.ರೂಪಾ, ಇಓ ಆರ್.ಪಿ.ಮಹೇಶ್, ಪಿಡಿಓ ರಾಜೇಂದ್ರ, ಮುಖಂಡರಾದ ಕಾಡೇನಹಳ್ಳಿ ರಾಮಚಂದ್ರು, ಜಯರಾಮು, ಡೇರಿ ಸ್ವಾಮಿಗೌಡ, ಪಾರ್ಥಸಾರಥಿ, ನಂದೀಶ್, ಡಾ.ಎಂ.ಬಿ.ಶ್ರೀನಿವಾಸ್, ಹೊಸಕೋಟೆ ಪುಟ್ಟಣ್ಣ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News