ಅಂಬಿಯಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

Update: 2019-01-12 18:21 GMT

ಮಂಡ್ಯ,ಜ.12: ಅಂಬಿ ಅವರ ವ್ಯಕ್ತಿತ್ವ ವಿಭಿನ್ನ, ಅವರಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಜನರ ಪ್ರೀತಿ ಗಳಿಸಿದ ಅವರಿಗೆ ಇದ್ದ ಅಭಿಮಾನಿ ಬಳಗ ಬೇರೆ ನಟರಿಗೆ ಇರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ನುಡಿನಮನ ಸಲ್ಲಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡದ ಮೇರುನಟ, ಮಾಜಿ ಸಚಿವ, ರೆಬೆಲ್‍ಸ್ಟಾರ್ ದಿ.ಡಾ.ಎಂ.ಹೆಚ್.ಅಂಬರೀಶ್ ಅವರ ಪುಣ್ಯಸ್ಮರಣೆ-ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಮಶ ಇಲ್ಲದ ನೇರ ನುಡಿಯ ಮಾತುಗಳನ್ನಾಡುತ್ತಿದ್ದ ಅವರ ಮನಸ್ಸು ಕಪಟ, ಮೋಸವಿಲ್ಲದ್ದಾಗಿತ್ತು. ಸ್ವಾಭಿಮಾನ ವಿಚಾರದಲ್ಲಿ ಯಾವುದೇ ಆಸೆ ಇರಲಿಲ್ಲ. ಪಕ್ಷದ ದೊಡ್ಡ ನಾಯಕರಾಗಿದ್ದರು. ಅವರ ಸುಪುತ್ರ ಅಭಿಷೇಕ್‍ ಗೌಡ ಅವರನ್ನು ಬೆಳಸಬೇಕು ಎಂದು ಮನವಿ ಮಾಡಿದರು.

ನಟ ಶಿವರಾಜ್‍ಕುಮಾರ್ ಮಾತನಾಡಿ, ಅಂಬರೀಶ್ ಮಾಮನ ಜೊತೆ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಮಂಡ್ಯ ಹಾಗೂ ಕನ್ನಡ ಜನ ಅವರ ಮೇಲೆ ಪ್ರೀತಿ ಇಟ್ಟಿದ್ದಾರೆ. ಅವರ ಅದರ್ಶಗಳನ್ನು ಮುಂದಿಟ್ಟುಕೊಂಡು ಮುಂದೆ ಸಾಗೋಣ. ಅವರ ನೆನಪುಗಳು ಯಾವಾಗಲೂ ಇರುತ್ತೆ, ಪೂಜಿಸೋಣ. ಅಪ್ಪಾಜಿ ಶನಿವಾರ, ಸೋಮವಾರ ಮಾಂಸ ತಿನ್ನುತ್ತಿರಲಿಲ್ಲ, ಆದರೆ ಅಂಬಿ ಪ್ರೀತಿಗೆ ತಿನ್ನಲು ಶುರು ಮಾಡಿದರು ಎಂದು ನೆನಪು ಮೆಲುಕು ಹಾಕಿದರು.

ನಟ ಜಗ್ಗೇಶ್ ಮಾತನಾಡಿ, ರಾಜಕುಮಾರ್, ವಿಷ್ಣು, ಅಂಬಿ ಕನ್ನಡ ಚಿತ್ರರಂಗದ ಪಿಲ್ಲರ್ ಗಳಿದ್ದಂತೆ. ಅವರ ನೆನಪು ನಮ್ಮ ಕಣ್ಣ ಮುಂದೆ ಹೋಗುತ್ತದೆ. ಸಾಧನೆ ಮಾಡಿದವರಿಗೆ ನನ್ನದು ಎಂಬ ಭಾವನೆ ಇರುತ್ತದೆ ಎಂದು ಹೇಳಿದರು.

ಹಿರಿಯ ನಟಿ ಬಿ.ಸರೋಜದೇವಿ ಮಾತನಾಡಿ, ನನ್ನ ತಮ್ಮ ಅಂಬಿ ಬಿಟ್ಟು ಹೋಗಿದ್ದು ತುಂಬಾ ನೋವಾಯಿತು. ಯಾವತ್ತೂ ಯಾವ ಅಧಿಕಾರಕ್ಕೂ ಆಸೆಪಡಲಿಲ್ಲ. ಎಲ್ಲವೂ ಹುಡುಕಿಕೊಂಡು ಬಂದವು. ಮೊದಲು ಕಲಾವಿದರಿಗೆ ನಮಗೆ ಸ್ವಂತ, ನಂತರ ರಾಜಕೀಯ ನಾಯಕರಿಗೆ, ಎಲ್ಲರಿಗೂ ಬೇಕಾಗಿದ್ದವರಾಗಿದ್ದರು ಎಂದರು.

ಸಾಹಿತಿ ಯೋಗರಾಜ್‍ ಭಟ್ ಮಾತನಾಡಿ, ಬೆಂಗಳೂರು ಮೊಬೈಲ್ ಇದ್ದಂಗೆ ಮಂಡ್ಯ ಚಾರ್ಚರ್ ಇದ್ದಂಗೆ. ಮಂಡ್ಯದ ಒಬ್ಬ ನಟ, ಧೀಮಂತ ವ್ಯಕ್ತಿ ಅಂಬರೀಶ್ ಅವರಿಗೆ ಸತ್ಯ, ನೇರ ನಡೆ ಇಷ್ಟ. ಅವರ ಜೊತೆ ಸಿನಿಮಾ ಮಾಡಿದ ನೆನಪು ಇನ್ನೂ ಹಸಿರಾಗಿಯೇ ಇದೆ. ದೊಡ್ಡಾಲದಮರದ ಬಳಿ ಡ್ರಾಮಾ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ ಅಭಿಮಾನಿಯೊಬ್ಬರಿಗೆ ಊಟ ತರಲು ಹೇಳಿದ್ದರು. ಆ ವೇಳೆ ಅಭಿಮಾನಿಗಳು ಯಥೇಚ್ಛವಾಗಿ ಊಟ ತಂದಿದ್ದರು. ಆ ಊಟವನ್ನು ಇಡೀ ಚಿತ್ರತಂಡಕ್ಕೆ ಊಟ ಮಾಡಿಸಿ, ಆರೋಗ್ಯದ ಸಮಸ್ಯೆಯಿಂದ ರಾಗಿ ಗಂಜಿ ಕುಡಿದಿದ್ದರು. ಸಿನಿಮಾ ಹೆಸರಿನಲ್ಲಿ ಹಣ ಗಳಿಸುವುದೇ ಹೆಚ್ಚು, ಅದರಲ್ಲಿ ಅಂಬಿ ಜನ ಗಳಿಸಿದವರು ಎಂದು ಹೊಗಳಿದರು.

ಕಾರ್ಯಕ್ರಮದಲ್ಲಿ ಎಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮೂಲಕ ಚಾಲನೆ ನೀಡಿದರು. ನಂತರ ಗಣ್ಯರು ದೀಪ ಬೆಳಸುವ ಮೂಲಕ ಉದ್ಘಾಟನೆ ನೆರವೇರಿಸಿ, ಅಂಬಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಂಬರೀಶ್ ರೀತಿಯಲ್ಲಿ ವೇಷಧಾರಿಯಾಗಿ ಹಲವು ಅಭಿಮಾನಿಗಳು ಆಗಮಿಸಿ ನೆರೆದಿದ್ದವರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು.
ಕನ್ವರ್ ಲಾಲ್ ವೇಷಧಾರಿಯಾಗಿ ಮಿಮಿಕ್ರಿ ಮಹಾದೇವ್, ಅಂಬಿ ಶೈಲಿಯಲ್ಲಿ ಹ್ಯಾಟು, ಕನ್ನಡಕ ಧರಿಸಿ ಬಂದ ಅಭಿಮಾನಿ ದೇವರಾಜ್ ಜೊತೆಗೆ ಹಲವರು ಹಾಡಿಗೆ ಸ್ಟೆಪ್ ಹಾಕಿದರು.

ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಟರಾದ ಯಶ್, ಸಾಧುಕೋಕಿಲ, ದೊಡ್ಡಣ್ಣ, ನಿರ್ಮಾಪಕ ರಾಕ್‍ ಲೈನ್ ವೆಂಕಟೇಶ್, ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಫ್ರಿಲ್ಲಾ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗಣ್ಯರಿಗೆ ಅಂಬಿ ಅಂತರಂಗ ಎಂಬ ಪುಸ್ತಕ ಉಡುಗೂರೆ ನೀಡಲಾಯಿತು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಸ್ವಾಗತಿಸಿ, ನಿರೂಪಕಿ ಅಪರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News