ಕೊಡಗು ಬ್ಯಾರಿಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬ್ಯಾರಿ ಕಪ್ ಕ್ರಿಕೆಟ್ ಪಂದ್ಯಾವಳಿ

Update: 2019-01-12 18:25 GMT

ಮಡಿಕೇರಿ, ಜ.12: ಶಿಸ್ತು ಮತ್ತು ಸಮಯ ಪಾಲನೆಯಿಂದ ಮಾತ್ರ ಯುವಜನರು ಜೀವನದಲ್ಲಿ ಅಭ್ಯುದಯವನ್ನು ಸಾಧಿಸಲು ಸಾಧ್ಯವೆಂದು ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ. 

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಬ್ಯಾರಿಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಬ್ಯಾರಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಹರಣದಿಂದ ಜೀವನದ ಮೌಲ್ಯ ಕಳೆದು ಹೋಗುತ್ತದೆ, ಅಶಿಸ್ತಿನಿಂದ ಜೀವನವೇ ಹಾಳಾಗುತ್ತದೆ ಎಂದು ತಿಳಿಸಿದ ಅನೂಪ್ ಮಾದಪ್ಪ, ಯುವ ಜನತೆ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. 

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎ.ಸಂಶುದ್ದೀನ್ ವಹಿಸಿದ್ದರು. ಉಪಾಧ್ಯಕ್ಷ ಮುನೀರ್ ಅಹಮದ್ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎಸ್.ಎಂ.ಶರೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ಲಾ ಸ್ವಾಗತಿಸಿ, ನಿರೂಪಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಜ.15 ರಂದು ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ ನಡೆಯಲಿದ್ದು, ಇದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ.ಸಂಶುದ್ದೀನ್ ತಿಳಿಸಿದರು.

ಸಮಾವೇಶದಲ್ಲಿ 10 ಮಂದಿ ಬ್ಯಾರಿ ಸಾಧಕರನ್ನು ಸನ್ಮಾನಿಸಲಾಗುವುದು, ಅಲ್ಲದೆ ಸುಮಾರು 30 ಮಂದಿ ಬ್ಯಾರಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News