ಶಿವಮೊಗ್ಗದಲ್ಲಿ ಮತ್ತೆ ಮೂರು ಮಂಗಗಳ ಶವ ಪತ್ತೆ: ಸಾಗರದ ಇಬ್ಬರಲ್ಲಿ ಮಂಗನ ಕಾಯಿಲೆ ಲಕ್ಷಣ

Update: 2019-01-14 12:21 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜ.14: ಜಿಲ್ಲೆಯ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳುಗಡ್ಡೆ ಗ್ರಾಮದಲ್ಲಿ ಮೂರು ಮಂಗಗಳ ಶವ ಪತ್ತೆಯಾಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟು ಮಾಡಿದೆ. 

ಗ್ರಾಮಸ್ಥರು ಮಂಗಗಳನ್ನು ಗಮನಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮೃತ ಮಂಗಗಳ ಅಂಗಗಳ ಮಾದರಿಯನ್ನು ಸಂಗ್ರಹಿಸಿದ್ದಾರೆ. ಕೆಎಫ್‍ಡಿ ವೈರಸ್ ತಗುಲಿದೆಯೇ ಎಂಬುವುದನ್ನು ಪತ್ತೆ ಹಚ್ಚಲು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. 

ನಂತರ ಮೂರು ಮಂಗಗಳನ್ನು ದಹಿಸಲಾಗಿದೆ. ಮಂಗಗಳ ಅಸಹಜ ಸಾವು ಮುಳುಗಡ್ಡೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರಲ್ಲಿ ಕೆಎಫ್‍ಡಿ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಕಾರ್ಯ ಕೂಡ ನಡೆಸಲಾರಂಭಿಸದ್ದಾರೆ. 

ಜ್ವರಕ್ಕೆ ತುತ್ತು: ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಅರಲಗೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆಂದು ಆಗಮಿಸಿದ್ದ ಇಬ್ಬರು ಗ್ರಾಮಸ್ಥರಲ್ಲಿ ಶಂಕಿತ ಮಂಗನಕಾಯಿಲೆಯ ರೋಗ ಲಕ್ಷಣಗಳು ಕಂಡುಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಜ್ವರ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಮಂಗನಕಾಯಿಲೆಗೆ ತುತ್ತಾಗಿದ್ದವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಇದರಲ್ಲಿ 33 ಜನರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಇವರು ಮನೆಗೆ ಆಗಮಿಸಿದ್ದಾರೆ. ಉಳಿದಂತೆ 19 ರೋಗಿಗಳು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ಶೋಧ: ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಸಾಯುತ್ತಿರುವ ಮಂಗಗಳನ್ನು ಪತ್ತೆ ಹಚ್ಚಿ ಕೆಎಫ್‍ಡಿ ರೋಗ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಅರಣ್ಯ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದೆ. ಸುಮಾರು 60 ಕ್ಕೂ ಅಧಿಕ ಸಿಬ್ಬಂದಿಗಳು ಅರಣ್ಯದಲ್ಲಿ ಮೃತಪಟ್ಟಿರುವ ಮಂಗಗಳ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News