ಕಾಂಗ್ರೆಸ್ ನಾಯಕರು, ಮೂರನೆ ದರ್ಜೆ ನಾಗರಿಕರಂತೆ ನೋಡಬಾರದು: ಸಿಎಂ ಕುಮಾರಸ್ವಾಮಿ

Update: 2019-01-14 14:49 GMT

ಬೆಂಗಳೂರು, ಜ.14: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಸ್ಥಾನ ಹಂಚಿಕೆ ಕುರಿತು ಗೊಂದಲ ಮುಂದುವರಿದಿದ್ದು, ಈ ವಿಚಾರದಲ್ಲಿ ಜೆಡಿಎಸ್‌ನ್ನು ಮೂರನೆ ದರ್ಜೆ ನಾಗರಿಕರಂತೆ ನೋಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಖಾಸಗಿ ಸುದ್ಧಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜೆಡಿಎಸ್‌ನ್ನು ಕಾಂಗ್ರೆಸ್ ಗೌರವದಿಂದ ಕಾಣಬೇಕು. ನಾವು ತೃತೀಯ ದರ್ಜೆ ಪ್ರಜೆಗಳಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೊಡು-ಪಡೆಯುವ ನೀತಿಯನ್ನು ಅನುಸರಿಸುವ ಮೂಲಕ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ವರ್ಚಸ್ಸು ದಿನೇ ದಿನೇ ಕುಂಠಿತವಾಗುತ್ತಿದೆ. ಅವರ ಪಕ್ಷದಲ್ಲೇ ಅಸಹಿಷ್ಣುತೆ ಮತ್ತು ಅಸಮಾಧಾನ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯನ್ನಾಗಿ ಆ ಪಕ್ಷವು ಬಿಂಬಿಸುತ್ತಿದೆ. ಆದರೆ, ಬಿಜೆಪಿ ವಿರುದ್ಧವಾಗಿರುವ ಪಕ್ಷಗಳು ರಾಹುಲ್ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಸ್ವೀಕರಿಸಲು ಸಮ್ಮತಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ

ಕಾಂಗ್ರೆಸ್-ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಸ್ಪರ್ಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಉದ್ದೇಶದಿಂದಲೇ ರಾಜ್ಯದಲ್ಲಿ ಎರಡು ಪಕ್ಷಗಳು ಒಗ್ಗೂಡಿ ಮೈತ್ರಿ ಸರಕಾರ ರಚಿಸಿದ್ದೇವೆ. ಅದೇ ಮಾದರಿಯಲ್ಲೆ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಮತ್ತು ದೇಶದ ಪರಿಸ್ಥಿತಿ ಸುಧಾರಿಸಲು ಈ ಎರಡೂ ಪಕ್ಷಗಳು ಸಮನ್ವಯತೆಯಿಂದ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸುವುದು ಅನಿವಾರ್ಯ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News