ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಮುಖಂಡರಿಂದ ‘ವ್ಯರ್ಥ ಕಸರತ್ತು’: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-14 14:06 GMT

ಬೆಂಗಳೂರು, ಜ. 14: ‘ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ 120 ಮಂದಿ ಶಾಸಕರ ಬೆಂಬಲವಿದ್ದು, ನಾವು ಬಿಜೆಪಿಯ ಯಾವುದೇ ಶಾಸಕರನ್ನು ಸೆಳೆಯಲು ಪ್ರಯತ್ನಿಸಿಲ್ಲ. ಆದರೆ, ಬಿಜೆಪಿ ಮುಖಂಡರು ಸುಖಾ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿದ್ದಾರೆಂದು ಹೇಳಲಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾಗೇಂದ್ರ, ಆನಂದ್ ಸಿಂಗ್ ಅವರ ಜತೆ ಮಾತನಾಡಿದ್ದೇನೆ. ಅವರು ಎಂದಿಗೂ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನಿಸಲಾಗುತ್ತಿದೆ ಎಂದು ಹೇಳುತ್ತಲೇ ಒಂದು ವಾರದಿಂದ ಬಿಜೆಪಿ ಮುಖಂಡರು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಏನೆಲ್ಲ ಆಮಿಷವೊಡ್ಡಿದ್ದಾರೆ. ಮುಂಬೈನಲ್ಲಿ ಬಿಜೆಪಿಯ ಯಾವ ಮುಖಂಡನ ಹೆಸರಿನಲ್ಲಿ ಹೊಟೇಲ್ ಕೊಠಡಿ ಕಾಯ್ದಿರಿಸಲಾಗಿತ್ತು ಎಂಬ ಎಲ್ಲ ಮಾಹಿತಿಯೂ ನನ್ನ ಬಳಿ ಇದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆ ಸಿದ್ದತೆ ನೆಪದಲ್ಲಿ ಬಿಜೆಪಿಯ 104 ಮಂದಿ ಶಾಸಕರನ್ನು ದಿಲ್ಲಿಯಲ್ಲಿ ಇರಿಸಿಕೊಂಡು ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಮುಖಂಡರು ವ್ಯರ್ಥ ಕಸರತ್ತು ನಡೆಸಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲಿಕ್ಕೆ ಅವರು ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕರನ್ನು ಸೆಳೆಯುವ ಉದ್ದೇಶವಿದ್ದರೆ 7 ತಿಂಗಳಿಂದ ಎಷ್ಟೋ ಮಂದಿಯನ್ನು ಸೆಳೆದುಕೊಳ್ಳಬಹುದಿತ್ತು. ಆದರೆ, ನಾನು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಹೋಗಿಲ್ಲ. ನಮಗೆ ಅಂತಹ ಪ್ರಮೇಯವೂ ಬಂದಿಲ್ಲ ಎಂದು ಕುಮಾರಸ್ವಾಮಿ ನುಡಿದರು.

ಜ.17ಕ್ಕೆ ಕರ್ನಾಟಕದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಲಿದೆ ಎಂಬ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತದೆ. ಬಿಜೆಪಿ ಮುಖಂಡರು ಇದೆಲ್ಲವನ್ನು ಸೃಷ್ಟಿಸುತ್ತಿದ್ದು, ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಅಸ್ಥಿರಗೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News