ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ರೈತರ ಒಂದಿಂಚೂ ಭೂಮಿ ವಶಪಡಿಸುವುದಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

Update: 2019-01-14 14:20 GMT

ಮಂಡ್ಯ,ಜ.14: ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣದಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ರೈತರ ಒಂದಿಂಚೂ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಯಾವುದೇ ಪ್ರಗತಿಪರ ಸಂಘಟನೆಯೊಂದಿಗೂ ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‍ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಪ್ರಾಥಮಿಕ ಹಂತದಲ್ಲಿರುವಾಗಲೇ ಕನ್ನಂಬಾಡಿ ಕಟ್ಟೆಗೆ ಅಪಾಯವಾಗುತ್ತದೆ, ರೈತರ ಭೂಮಿ ಕಿತ್ತುಕೊಳ್ಳುತ್ತಾರೆಂದು ಹಲವರು ಪ್ರತಿಭಟನೆ ಮಾಡುತ್ತಿದ್ದಾರೆ. ವಾಟಾಳ್ ನಾಗರಾಜ್ ತಮಟೆ ಚಳವಳಿ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆಯಾಗಿರುವ ಕನ್ನಂಬಾಡಿ ಕಟ್ಟೆಗೆ ಡಿಸ್ನಿಲ್ಯಾಂಡ್ ಮಾದರಿಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಭಾಗದ ಜನರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಆತ್ಮಹತ್ಯೆಗಳು ಮತ್ತೆ ಮುಂದುವರೆಯಬಾರದು. ಬರೀ ಕೃಷಿಯನ್ನೇ ನಂಬಿಕೊಳ್ಳದೆ ರೈತ ಯುವಕರು ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳಲಿ ಎಂಬ ಚಿಂತನೆಯಿಂದ ಬಜೆಟ್‍ನಲ್ಲಿ ಡಿಸ್ನಿಲ್ಯಾಂಡ್ ಘೋಷಿಸಿದ್ದೇನೆ. ದೊಡ್ಡ ಮಟ್ಟದಲ್ಲಿ ಡಿಸ್ನಿಲ್ಯಾಂಡ್ ಮಾಡುತ್ತಿದ್ದು ಸುಮಾರು 50 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡುವಂತಾಗುತ್ತದೆ. ರೈತರ ಒಂದಿಂಚೂ ಭೂಮಿಯನ್ನು ಈ ಯೋಜನೆಗೆ ವಶಪಡಿಸಿಕೊಳ್ಳುವುದಿಲ್ಲ. ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಸರ್ಕಾರಿ ಭೂಮಿ ಇದ್ದು, ಅದರಲ್ಲಿ ಡಿಸ್ನಿಲ್ಯಾಂಡ್ ಮಾಡಲಾಗುವುದು ಎಂದರು. 

ಕೆಲವರು ರೈತರ ಭೂಮಿ ವಶಪಡಿಸಿಕೊಳ್ಳಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 50 ಸಾವಿರ ಕುಟುಂಬದ ನೆಮ್ಮದಿಗಾಗಿ ಅಣೆಕಟ್ಟೆಗೆ ಯಾವುದೇ ಧಕ್ಕೆ ಬಾರದ ಹಾಗೆ ವಿದೇಶಿ ತಂತ್ರಜ್ಞರ ಸಲಹೆ ಸಹಕಾರ ಪಡೆದು ಡಿಸ್ನಿಲ್ಯಾಂಡ್ ಯೋಜನೆ ಮಾಡಲಾಗುವುದು. ಈ ಬಗ್ಗೆ ಯಾರೊಂದಿಗಾದರೂ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.

ಭತ್ತ ಖರೀದಿ ಗೊಂದಲ ನಿವಾರಣೆ: ಭತ್ತ ಖರೀದಿ ಸಂಬಂಧ ಈಗಾಗಲೇ ರೈಸ್‍ಮಿಲ್ ಮಾಲಕರೊಂದಿಗೆ ಮಾತುಕತೆ ನಡೆದು ರೈತರ ಭತ್ತ ಖರೀದಿ ಆರಂಭವಾಗಿತ್ತು. ಆದರೆ ಬ್ಯಾಂಕ್ ಗ್ಯಾರಂಟಿ ಕೊಡಲು ರೈಸ್‍ಮಿಲ್ ಮಾಲಕರು ನಿರಾಕರಿಸಿದ್ದರಿಂದ ಭತ್ತ ಖರೀದಿಯಲ್ಲಿ ಗೊಂದಲವಾಗಿತ್ತು. ಇಂದು ಸಂಜೆಯೊಳಗೆ ಈ ಸಮಸ್ಯೆ ಬಗೆಹರಿಸುವೆ. ರೈಸ್‍ಮಿಲ್ ಮಾಲಕರು ಉಳಿಯಬೇಕು, ರೈತರಿಗೂ ಉತ್ತಮ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

5 ವರ್ಷ ಇರುತ್ತೇನೆ: ವಿರೋಧ ಪಕ್ಷವಾದ ಬಿಜೆಪಿ ನನಗೆ ಡೆಡ್‍ಲೈನ್ ಕೊಡುತ್ತಲೇ ಬರುತ್ತಿದೆ. ಮಾಧ್ಯಮವೊಂದರಲ್ಲಿ ಸಂಕ್ರಾಂತಿಯ ಮಾರನೆಯ ದಿನ ಸರ್ಕಾರ ಬೀಳುತ್ತದೆ ಎಂದು ವರದಿಯೂ ಕೂಡ ಪ್ರಸಾರವಾಗಿದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ. ಇನ್ನೈದು ವರ್ಷ ನಾನೇ ಇರುತ್ತೇನೆ. ಸರ್ಕಾರ ಉರುಳಿಸುವ ಬಗ್ಗೆ ತಲೆಕೆಸಿಕೊಳ್ಳದೆ ನಾನು ರಾಜ್ಯದ ಪ್ರಗತಿಯ ಬಗ್ಗೆ ಸದಾ ಕಾರ್ಯೋನ್ಮುಖನಾಗಿದ್ದೇನೆ. ಮಂಡ್ಯ ಜಿಲ್ಲೆಯನ್ನು ಆರ್ಥಿಕವಾಗಿ ಬಲಪಡಿಸಲು ಹಲವು ಯೋಜನೆಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

ಗೋಷ್ಠಿಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಜಾ.ದಳ ಅಧ್ಯಕ್ಷ ಡಿ.ರಮೇಶ್ ಮೊದಲಾದವರು ಹಾಜರಿದ್ದರು.

ಮೈಷುಗರ್ ಕಾರ್ಖಾನೆ ಅಭಿವೃದ್ಧಿಗೆ ಈವರೆಗೆ ಹಲವು ಸರ್ಕಾರಗಳು ಬರೋಬ್ಬರಿ 400 ಕೋಟಿ ರೂ. ಮಿಗಿಲಾಗಿ ಹಣ ನೀಡಿದ್ದರೂ ಕಾರ್ಖಾನೆ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಕಾರ್ಖಾನೆ ಪುನಃಶ್ಚೇತನ ಕಷ್ಟ ಸಾಧ್ಯವೆನ್ನುವ ಪರಿಸ್ಥಿತಿಯಿದೆ. ಹೊಸ ಯೂನಿಟ್ ಅಳವಡಿಕೆಗೆ ಒತ್ತಾಯವಿದೆ. ಆದರೆ, ಹೊಸ ಕಾರ್ಖಾನೆ ಅಷ್ಟು ಲಾಭದಾಯಕವಲ್ಲ ಎನ್ನುವುದು ಆರ್ಥಿಕ ಇಲಾಖೆಯ ಅಭಿಪ್ರಾಯ. ಆದರೂ ಸಹ ಜಿಲ್ಲೆಯ ರೈತರು, ಜನರ ಹಿತದೃಷ್ಟಿಯಿಂದ ಕಾರ್ಖಾನೆಗೆ ಹೊಸ ರೂಪ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News