×
Ad

ಪಿಎಸ್ಸೈ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನ ಪ್ರಕರಣ: ಇಬ್ಬರು ಯುವತಿಯರು ಸೇರಿ 16 ಮಂದಿಯ ಬಂಧನ

Update: 2019-01-14 19:59 IST

ಬೆಂಗಳೂರು, ಜ.14: ಸಿವಿಲ್ ಪೊಲೀಸ್ ಎಸ್ಸೈ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸುತ್ತಿದ್ದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಇಬ್ಬರು ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿ, 41.20 ಲಕ್ಷ ನಗದು, 3 ಲಕ್ಷ ಮೌಲ್ಯದ ಚೆಕ್‌ಗಳು, ಲ್ಯಾಪ್‌ಟಾಪ್, ಪ್ರಿಂಟರ್ಸ್‌, ವಾಹನಗಳ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್, ಬೆಂಗಳೂರಿನ ಬಸವರಾಜ, ಹೋಳಿಯಪ್ಪ, ಸಂತೋಷ, ನಾಗರಾಜ್, ದಿಲೀಪ್ ಕುಮಾರ್, ಯದುಕುಮಾರ್, ಕಾರ್ತಿಕ್, ಸುರೇಶ, ತುಮಕೂರಿನ ಹರ್ಷ ಕುಮಾರ್, ಕೊಪ್ಪಳದ ಶಿವಕುಮಾರ್ ಮಡಕೇಶ್ವರ, ಬೆಳಗಾವಿಯ ಭಾಗ್ಯವಂತ ಸಗರೆ, ಅರುಣ್ ರಾಮಪ್ಪ, ಹನುಮೇಶ್, ಬಾಗಲಕೋಟೆಯ ನೀಲಮ್ಮ(24), ವಿಜಯಪುರ ಜಿಲ್ಲೆಯ ಜಯಶ್ರೀ(27), ಭೀಮಸಿಂಗ್ ಶಂಕರ್ ರಾಥೋಡ್ ಬಂಧಿತ ಆರೋಪಿಗಳೆಂದು ತಿಳಿಸಿದರು.

ಸಿಕ್ಕಿದ್ದು ಹೇಗೆ?: 2018ರ ನವೆಂಬರ್‌ನಲ್ಲಿ ಸಿವಿಲ್ ಕಾನ್‌ಸ್ಟೇಬಲ್ ಹುದ್ದೆ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 130 ಜನರನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಹಾಗೂ ಅವರ ಸಹಚರರ ಮೇಲೆ ಸಿಸಿಬಿ ಪೊಲೀಸರು ನಿಕಟ ನಿಗಾ ಇಟ್ಟಿದ್ದರು. ಜ.13 ರಂದು ರಾಜ್ಯಾದ್ಯಂತ ನಡೆಯುತ್ತಿದ್ದ ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನೂ ಕದ್ದು ಅದನ್ನು ಉದ್ಯೋಗಾಕಾಂಕ್ಷಿಗಳಿಂದ ಲಕ್ಷಗಟ್ಟಲೆ ಹಣ ಮತ್ತು ಚೆಕ್‌ಗಳನ್ನು ಪಡೆದು, ಅವರನ್ನೆಲ್ಲಾ ಒಂದೊಂದು ಕೇಂದ್ರಗಳಲ್ಲಿ ಸೇರಿಸಿ ಕದ್ದ ಪ್ರಶ್ನೆಪತ್ರಿಕೆ ಮತ್ತು ಅವುಗಳಿಗೆ ಉತ್ತರಗಳನ್ನು ನೀಡಿ, ಹೆಚ್ಚು ಅಂಕಗಳನ್ನು ಪಡೆಯಲು ಸಂಚು ರೂಪಿಸಿದ್ದ ಸಂಬಂಧ ಪ್ರಕರಣವೊಂದು ಬೆಳಕಿಗೆ ಬಂದಿತ್ತು.

ಈ ಸಂಬಂಧ ಪ್ರಕರಣವೊಂದು ಬೆಂಗಳೂರು ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ತಿಳಿದ ಪೊಲೀಸ್ ಆಯುಕ್ತರು, ಸಿಸಿಬಿ ಘಟಕಕ್ಕೆ ಮುಂದಿನ ತನಿಖೆಗೆ ವರ್ಗಾಯಿಸಿದ್ದರು.

ಬಳಿಕ ತನಿಖೆ ಮುಂದುವರೆಸಿದ ಸಿಸಿಬಿ ತನಿಖಾಧಿಕಾರಿಗಳು, ಕಾರ್ಯಾಚರಣೆ ನಡೆಸಿ, ಏಕಕಾಲದಲ್ಲಿ ಬೆಂಗಳೂರು ನಗರ, ಬೆಳಗಾವಿ, ತುಮಕೂರು ಮತ್ತು ವಿಜಯಪುರ ಸ್ಥಳಗಳಲ್ಲಿ ದಾಳಿ ನಡೆಸಿ 16 ಜನರನ್ನು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಗರ ಅಪರಾಧ ಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್.ಎಸ್ ಹಾಜರಿದ್ದರು. ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳನ್ನು ಪೊಲೀಸ್ ಆಯುಕ್ತರು ಪ್ರಶಂಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News