ಯಾವುದೇ ಒತ್ತಡಕ್ಕೊಳಗಾಗದೇ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಿ: ಸಿಎಂ ಕುಮಾರಸ್ವಾಮಿ

Update: 2019-01-14 15:08 GMT

ಮೈಸೂರು,ಜ.14: ಯಾವುದೇ ಒತ್ತಡಕ್ಕೂ ಬಗ್ಗದೆ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನಿರ್ಧಾರವನ್ನು ಈ ಮೈದಾನದಿಂದಲೇ ಮಾಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಗಮನ ಆರಕ್ಷಕ ಉಪನಿರೀಕ್ಷಕರ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಸೋಮವಾರ ಕರ್ನಾಟಕ ಪೊಲೀಸ್ ಅಕಾಡೆಮಿಯ 41ನೇ ತಂಡದ ಆರಕ್ಷಕ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ, ಬಹುಮಾನ ವಿತರಿಸಿ ಮಾತನಾಡಿದರು. 

ಏಳು ತಿಂಗಳ ನನ್ನ ಅವಧಿಯಲ್ಲಿ ನಾನು ಪೊಲೀಸ್ ನಿರ್ಗಮನ ಪಥಸಂಚಲನದಲ್ಲಿ ಎರಡನೇ ಬಾರಿಗೆ ಭಾಗಿಯಾಗಿದ್ದೇನೆ. ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಉತ್ತಮ ತರಬೇತಿ ಪಡೆದಿದ್ದೀರಿ. ಜನರ ಸೇವೆ ಮಾಡಲು ಅತ್ಯುತ್ತಮ ಘಟ್ಟ ತಲುಪಿದ್ದೀರಿ. ಪೊಲೀಸ್ ಇಲಾಖೆ ಅತ್ಯುತ್ತಮ ಇಲಾಖೆ. ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಸಮರ್ಥವಾದ ಇಲಾಖೆ. ಪೊಲೀಸರಾಗಿ ಆಯ್ಕೆಯಾಗಿರೋದು ನಿಮ್ಮ ಸುದೈವ. ಅತ್ಯಂತ ಪ್ರಾಮಾಣಿಕವಾಗಿ ನಾಡಿನ ಪ್ರತಿಯೊಬ್ಬ ಪ್ರಜೆಯ ರಕ್ಷಣೆ ಮಾಡಿ. ಯಾವುದೇ ಒತ್ತಡಕ್ಕೆ ಬಗ್ಗದೆ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನಿರ್ಧಾರವನ್ನು ಈ ಮೈದಾನದಿಂದಲೇ ಮಾಡಿ. ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯಬೇಡಿ. ಸ್ಥಳ ನಿಯುಕ್ತಿಗೆ ಇತ್ತೀಚಿನ ವ್ಯವಸ್ಥೆಯಲ್ಲಿ ಪ್ರಭಾವ ಬೀರುವ ಪರಿಸ್ಥಿತಿಗೆ ಒಳಗಾಗಬೇಡಿ. ಯಾವುದೇ ಸ್ಥಳದಲ್ಲಿ ನಿಯುಕ್ತಿಮಾಡಿದ ವೇಳೆ, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಿ ಎಂದರು.

ಲಾಕಪ್ ಅನ್ನು ಪ್ರೊಬೆಷನರಿ ಪಿಎಸ್ ಐ ಪ್ರಕಾಶ್ ಕನಜೇರ್, ಇನ್ವೆಸ್ಟಿಗೇಶನ್ ಕಪ್ ನ್ನು ಮೋಹನ್ ಕುಮಾರ್ ಡಿ.ಆರ್, ಪಬ್ಲಿಕ್ ಆರ್ಡರ್ ಕಪ್ ನ್ನು ಕಿರಣ್ ರಾಜ್ ಹೆಚ್.ಎನ್, ಫಿಸಿಕಲ್ ಟ್ರೇನಿಂಗ್ ಕಪ್ ನ್ನು ರಾಕೇಶ್ ಎನ್.ಕೆ, ಡ್ರಿಲ್ ಕಪ್ ಅನ್ನು ಆನಂದ ಮನಶೆಟ್ಟರ್, ಟಾಕ್ಟಿಕ್ಸ್ ಕಪ್ ನ್ನು ಸಂತೋಷ್ ಕುಮಾರ್, ಬೆಸ್ಟ್ ರೈಫಲ್ ಫೈರಿಂಗ್- ಶಿವಶಂಕರ್, ಹರಿನಾಥ್ ಬಾಬು, ಬೆಸ್ಟ್ ರಿವಾಲ್ವರ್ ಫೈರಿಂಗ್- ನಬಿಸಾ ವಾಲಿಕರ್, ಡೈರೆಕ್ಟರ್ ಎಸ್ಸೆಸ್ ಮೆಂಟ್ ಕಪ್ ನ್ನು ಟಿಪ್ಪುಸುಲ್ತಾನ್ ನಾಯಕವಾಡಿ, ಉತ್ತಮ ಒಳಾಂಗಣ- ಶೃತಿ ಜಿ, ಉತ್ತಮ ಮಹಿಳಾ ಹೊರಾಂಗಣ- ಅಕ್ಷತಾ ಎಫ್ ಕುರುಕುಂಡಿ, ಉತ್ತಮ ಹೊರಾಂಗಣ -ಆನಂದ ಮನಶೆಟ್ಟರ್, ಬೆಸ್ಟ್ ಲೇಡಿ ಪ್ರೊಬೆಷನರ್ ಹೋಮ್ ಮಿನಿಸ್ಟರ್ ಟ್ರೋಫಿ- ಶೃತಿ ಜಿ, ಆಲ್ ರೌಂಡ್ ಬೆಸ್ಟ್ ಪ್ರೊಬೆಷನರ್, ಚೀಫ್ ಮಿನಿಸ್ಟರ್ಸ್ ಟ್ರೋಫಿ, ಛೀಫ್ ಮಿನಿಸ್ಟರ್ಸ್ ಸ್ವಾರ್ಡ್, ಡಿಜಿ& ಐಜಿಪಿ ಡಿಜಿಪಿ & ಗರುಡಾಚಾರ್ಸ್ ಕ್ಯಾಶ್ ರಿವಾರ್ಡ್- ಟಿಪ್ಪು ಸುಲ್ತಾನ್ ನಾಯಕವಾಡಿ ಅವರುಗಳು ಪಡೆದುಕೊಂಡರು.

ಈ ಸಂದರ್ಭ ಗೃಹ ಸಚಿವ ಎಂ.ಬಿ.ಪಾಟೀಲ್, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಪೊಲೀಸ್ ಮಹಾನಿರ್ದೇಶಕ ಪದಮ್ ಕುಮಾರ್ ಗರ್ಗ್, ಪೊಲೀಸ್ ಮಹಾನಿರೀಕ್ಷಕರ ರವಿ ಎಸ್, ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News