ವೃದ್ಧರ ಬಳಿ ಸಿಬಿಐ, ಸಿಐಡಿ ಅಧಿಕಾರಿಗಳೆಂದು ಹೇಳಿ ಚಿನ್ನಾಭರಣ ದೋಚಿದ ಖದೀಮರು

Update: 2019-01-14 16:15 GMT

ಮೈಸೂರು,ಜ.14: ಇಬ್ಬರು ವೃದ್ಧರ ಬಳಿ ತಾವು ಸಿಬಿಐ, ಸಿಐಡಿ ಅಧಿಕಾರಿಗಳೆಂದು ಹೇಳಿಕೊಂಡು ಚಿನ್ನಾಭರಣ ದೋಚಿದ ಘಟನೆ ಮೈಸೂರಿನ ಎರಡು ಕಡೆ ನಡೆದಿದೆ.

ಗೋಕುಲಂ ನಿವಾಸಿ ಕೃಷ್ಣಪ್ರಸಾದ್(80) ಶನಿವಾರ ಬೆಳಿಗ್ಗೆ ಸೂಪರ್ ಮಾರ್ಕೆಟ್ ನಿಂದ ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಮೂವರು ಅಪರಿಚಿತ ವ್ಯಕ್ತಿಗಳು ಬಂದು ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ನಾವು ಔಷಧಿಯನ್ನು ಪರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿ ಜೇಬುಗಳನ್ನು ಹುಡುಕಿದ್ದಾರೆ. ಬಳಿಕ ಕೃಷ್ಣಪ್ರಸಾದ್ ಅವರ ಬಳಿಯಿದ್ದ ಪರ್ಸ್ ಹಾಗೂ ಕರವಸ್ತ್ರವನ್ನು ತೆಗೆದು ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಉಂಗುರವನ್ನು ತೆಗೆಸಿ ಕರವಸ್ತ್ರದಲ್ಲಿ ಹಾಕಿ, ಇಲ್ಲಿ ಧರಿಸಬೇಡಿ ಮನೆಗೆ ಹೋಗಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಮನೆಗೆ ಹೋಗಿ ನೋಡಿದಾಗ 25 ಗ್ರಾಂ ತೂಕದ ಚಿನ್ನದ ಸರ ಹಾಗೂ 8 ಗ್ರಾಂ ತೂಕದ ಚಿನ್ನದ ಉಂಗುರ ಇರಲಿಲ್ಲ ಎಂದು ದೂರು ನೀಡಿದ್ದಾರೆ.

ಕೆ.ಜಿ.ಕೊಪ್ಪಲಿನ ನಿವಾಸಿ ಶಿವಲಿಂಗು(74) ಎಂಬವರು ಕೆಆರ್ ಎಸ್ ರಸ್ತೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ಬೈಕ್ ನಿಲ್ಲಿಸುವಂತೆ ಹೇಳಿ ತಾವು ಸಿಐಡಿ ಅಧಿಕಾರಿಗಳೆಂದು ಹೇಳಿಕೊಂಡಿದ್ದು, ತಮ್ಮ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. 'ಮುಂದೆ ದರೋಡೆಕೋರರಿದ್ದಾರೆ ನಿಮ್ಮ ಚಿನ್ನಾಭರಣವನ್ನು ಬಿಚ್ಚಿ ಕರವಸ್ತ್ರದಲ್ಲಿ ಹಾಕಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಿ' ಎಂದು ಹೇಳಿದ್ದಾರೆ. ಕತ್ತಿನಲ್ಲಿದ್ದ 1ಚಿನ್ನದ ಸರ, ಕೈಯಲ್ಲಿದ್ದ 1ಬ್ರೇಸ್ಲೇಟ್, 1ಉಂಗುರವನ್ನು ಬಿಚ್ಚಿಸಿ ಕರವಸ್ತ್ರಕ್ಕೆ ಹಾಕಿದ್ದು, ಮನೆಗೆ ಹೋಗಿ ನೋಡಿದಾಗ ಚಿನ್ನಾಭರಣ ಇರಲಿಲ್ಲ ಎಂದು ಶಿವಲಿಂಗು ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News