ಕಟ್ಟಡಗಳನ್ನು ನೆಲಸಮಗೊಳಿಸಿದ ಅಧಿಕಾರಿಗಳಿಂದ ನಷ್ಟದ ಮೊತ್ತ ವಸೂಲಿ ಮಾಡಲು ಹೈಕೋರ್ಟ್ ಆದೇಶ

Update: 2019-01-14 16:57 GMT

ಬೆಂಗಳೂರು, ಜ.14: ಸಕಲೇಶಪುರದಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ರಸ್ತೆ ಪಕ್ಕದಲ್ಲಿನ ಕಟ್ಟಡಗಳನ್ನು ನೆಲಸಮಗೊಳಿಸಲು ಕಾರಣವಾದ ಅಧಿಕಾರಿಗಳಿಂದ ನಷ್ಟದ ಮೊತ್ತವನ್ನು ವಸೂಲಿ ಮಾಡಿ ಸಂತ್ರಸ್ತರಿಗೆ ನೀಡಬೇಕು ಮತ್ತು ಅಂತಹ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಈ ನಡೆಯನ್ನು ದಾಖಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಸಲ್ಲಿಸಲಾಗಿದ್ದ 15ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ಸೋಮವಾರ ವಿಲೇವಾರಿ ಮಾಡಿದ ನ್ಯಾಯಮೂರ್ತಿ ಕಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಸ್ತೆ ವಿಸ್ತರಣೆ ಕಾಮಗಾರಿಯನ್ನು ನಿರ್ಬಂಧಿಸಿದೆ.

ಅರ್ಜಿದಾರರು ಹೆಚ್ಚಿನ ಪರಿಹಾರ ಬಯಸಿದಲ್ಲಿ ಮೂರು ತಿಂಗಳ ಒಳಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬಹುದು ಅಥವಾ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ರಸ್ತೆ ವಿಸ್ತರಣೆಗೆ ಸಂಬಂಧಿಸಿದ ಕಾಮಗಾರಿ, ಇದರಿಂದ ಉಂಟಾಗಿರುವ ನಷ್ಟ, ನೀಡಬೇಕಾದ ಪರಿಹಾರ ಹಾಗೂ ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಸೇವಾ ದಾಖಲೆಯಲ್ಲಿ ನಮೂದಿಸಿದ ವಿವರಗಳ ಬಗೆಗಿನ ಸಮಗ್ರ ವರದಿಯನ್ನು ನಾಲ್ಕು ತಿಂಗಳ ಒಳಗೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಬೇಕು ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

ಆಕ್ಷೇಪಣೆ ಏನು: ಭಾರಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಈಗಾಗಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಕಲೇಶಪುರ ಹೊರವಲಯದಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿದೆ ಮತ್ತು ಈ ಕುರಿತ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಇದಕ್ಕೆ ಹೊರತಾಗಿ ಕೈಗೊಂಡಿರುವ ವಿಸ್ತರಣೆ ಕಾಮಗಾರಿ ಕಾನೂನು ಬಾಹಿರವಾಗಿದೆ. ಇದರಿಂದ ಇಲ್ಲಿನ 220 ವರ್ಷಗಳ ಪಾರಂಪರಿಕ ಮತ್ತು ಐತಿಹಾಸಿಕ ಕಟ್ಟಡಗಳು ನೆಲಸಮಗೊಂಡಿವೆ. ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಅರ್ಜಿದಾರರ ಪರ ಎಚ್.ಪವನಚಂದ್ರ ಶೆಟ್ಟಿ, ಜಿ.ಆರ್.ಪ್ರಕಾಶ್, ಪ್ರಕಾಶ್ ಎಂ.ಪಾಟೀಲ, ಎ.ಪಿ.ಪುಲಕೇಶಿ ವಕಾಲತ್ತು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News