ಶಿವಮೊಗ್ಗ ಸಹ್ಯಾದ್ರಿ ಉತ್ಸವ: ಕ್ರೀಡಾ ಸ್ಪರ್ಧೆಗಳು, ಹೆಲಿಟೂರ್, ಟಾಂಗಾ ಟೂರ್ ಆಕರ್ಷಣೆ- ಜಿಲ್ಲಾಧಿಕಾರಿ
ಶಿವಮೊಗ್ಗ, ಜ.14: ಜನವರಿ 23 ರಿಂದ 27ರ ವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಲಿಕಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾರ್ಡ್ಯ ಸ್ಪರ್ಧೆ ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಬಸ್ ಟೂರ್ ಪ್ಯಾಕೇಜ್: ಉತ್ಸವದ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಬ್ಸಿಡಿ ದರದಲ್ಲಿ ಬಸ್ ಮೂಲಕ ಟೂರ್ ಪ್ಯಾಕೇಜ್ ಮಾಡಲಾಗಿದೆ. ಒಟ್ಟು 7 ಮಾರ್ಗಗಳನ್ನು ಮಾಡಲಾಗಿದ್ದು, ಕೇವಲ 100 ರೂ. ದರ ನಿಗದಿಪಡಿಸಲಾಗಿದೆ. ಸೈನ್ಸ್ ಮೈದಾನದಿಂದ ಪ್ರತಿದಿನ ಮುಂಜಾನೆ 7:30 ಕ್ಕೆ ಬಸ್ ಹೊರಟು ಸಂಜೆ 5:30ಕ್ಕೆ ವಾಪಾಸಾಗಲಿದೆ. ಉತ್ತಮ ಗುಣಮಟ್ಟದ ಖಾಸಗಿ ಬಸ್‍ಗಳ ಮೂಲಕ ಪ್ರವಾಸ ಆಯೋಜಿಸಲಾಗುವುದು. ಮಧ್ಯಾಹ್ನದ ಊಟದ ವೆಚ್ಚವನ್ನು ಸಹ ಭರಿಸಲಾಗುವುದು. ಸಾರ್ವಜನಿಕರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಇದು ಉತ್ತಮ ಅವಕಾಶವಾಗಿದೆ. ಚಾರಣಪ್ರಿಯರಿಗಾಗಿ ಚಾರಣ ಮಾರ್ಗವನ್ನು ಗುರುತಿಸಿ ಗೈಡೆಡ್ ಚಾರಣ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಬಸ್ ಟೂರ್ ಮಾರ್ಗಗಳು: 1. ಶಿವಮೊಗ್ಗ, ಹರಕೆರೆ, ಗಾಜನೂರು, ಸಕ್ರೆಬೈಲು, ಮಂಡಗದ್ದೆ, ಚಿಬ್ಬಲಗುಡ್ಡ, ಮೃಗವಧೆ, ಕುಪ್ಪಳ್ಳಿ, ಶಿವಮೊಗ್ಗ.
2. ಶಿವಮೊಗ್ಗ, ಸೂರಗೊಂಡನಕೊಪ್ಪ, ಅಂಜನಾಪುರ ಡ್ಯಾಂ, ಹುಚ್ಚರಾಯಸ್ವಾಮಿ ದೇವಸ್ಥಾನ, ಉಡತಡಿ, ಬಳ್ಳಿಗಾವೆ, ತೊಗರ್ಸಿ, ಶಿವಮೊಗ್ಗ
3. ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಸಾಗರ ಮಾರಿಕಾಂಬ ದೇವಸ್ಥಾನ, ಇಕ್ಕೇರಿ, ಕೆಳದಿ, ಶ್ರೀಧರ ಆಶ್ರಮ, ವರದಹಳ್ಳಿ, ಜೋಗ, ಶಿವಮೊಗ್ಗ.
4. ಶಿವಮೊಗ್ಗ, ಕೋಡೂರು, ಕಾರಣಗಿರಿ, ನಗರಕೋಟೆ, ನಿಟ್ಟೂರು, ಸಿಗಂದೂರು, ಶಿವಮೊಗ್ಗ.
5. ಶಿವಮೊಗ್ಗ, ಹರಕೆರೆ, ಗಾಜನೂರು, ಸಕ್ರೆಬೈಲು, ಮಂಡಗದ್ದೆ, ತೀರ್ಥಹಳ್ಳಿ ರಾಮೇಶ್ವರ, ಕುಂದಾದ್ರಿ, ಆಗುಂಬೆ, ಶಿವಮೊಗ್ಗ. 6. ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಸ್ಥಾನ, ಗಾಜನೂರು ಜಲಾಶಯ, ಸಕ್ರೆಬೈಲು, ಕೂಡ್ಲಿ, ಸೇಕ್ರೆಡ್ ಹಾರ್ಟ್ ಚರ್ಚ್, ತ್ಯಾವರೆಕೊಪ್ಪ, ಮುದ್ದಿನಕೊಪ್ಪ ಟ್ರೀ ಪಾರ್ಕ್, ಶಿವಮೊಗ್ಗ.
ಹೆಲಿಟೂರಿಸಂ: ಶಿವಮೊಗ್ಗ ನಗರದ ವೈಮಾನಿಕ ಪ್ರವಾಸಕ್ಕಾಗಿ ಉತ್ಸವದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. 8 ನಿಮಿಷಕ್ಕೆ 2.5 ಸಾವಿರ ರೂ, 10 ನಿಮಿಷಕ್ಕೆ 3ಸಾವಿರ ರೂ ಹಾಗೂ 1ಗಂಟೆ 10ನಿಮಿಷಗಳ ಜೋಗ್ ಪ್ಯಾಕೇಜ್‍ಗೆ 20 ಸಾವಿರ ರೂ. ನಿಗದಿಪಡಿಸಲಾಗಿದೆ. ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಟೇಕಾಫ್ ಆಗಲಿದೆ ಎಂದರು.
ಟಾಂಗ್ ಟೂರ್: ಶಿವಮೊಗ್ಗ ನಗರದಲ್ಲಿ ಪ್ರವಾಸಿ ತಾಣಗಳಿಗೆ, ಕಾರ್ಯಕ್ರಮದ ಮುಖ್ಯ ವೇದಿಕೆಗೆ ಸೇರಿದಂತೆ ಇನ್ನಿತರ ಕಡೆಗಳಿಗೆ ಸಾರ್ವಜನಿಕರನ್ನು ಕರೆದೊಯ್ಯಲು ಟಾಂಗಾ ಟೂರ್ ವ್ಯವಸ್ಥೆ ಮಾಡಲಾಗಿದೆ. ಆಲಂಕೃತವಾಗಿರುವ ಟಾಂಗಾಗಳು ನೆಹರು ಮೈದಾನ ಬಳಿ ಲಭ್ಯವಿರಲಿದೆ ಎಂದರು.
ಉತ್ಸವದ ಅಂಗವಾಗಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಜನವರಿ 24ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಲಿದೆ ಎಂದು ಹೇಳಿದರು.
ನೋಂದಣಿಗೆ ಮನವಿ: ಕ್ರೀಡೆಗಳ ಕುರಿತಾದ ಮಾಹಿತಿ ಹಾಗೂ ನೋಂದಣಿಗಾಗಿ ಲೋಕೇಶ್ 9483778002, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಶಿವಲಿಂಗು 8762778402, 08182-255293, ಹೆಲಿಟೂರ್ ಬುಕ್ಕಿಂಗ್‍ಗಾಗಿ ಚಂದನ್ 9742038039, ಬಸ್‍ಟೂರ್ ಗಾಗಿ ದರ್ಶನ್ 9591522903 ಸಂಪರ್ಕಿಸಿ ಬುಕ್ಕಿಂಗ್ ಮಾಡುವಂತೆ ಅವರು ಕೋರಿದರು.
ಜಿಲ್ಲಾಧಿಕಾರಿ ಅವರು ಇದೇ ಸಂದರ್ಭ ಸಹ್ಯಾದ್ರಿ ಉತ್ಸವದ ಆಕರ್ಷಕ ಪೋಸ್ಟರ್ ಬಿಡುಗಡೆ ಮಾಡಿದರು. ಅಪರ ಜಿಲ್ಲಾಧಿಕಾರಿ ಅನುರಾಧ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮನಾಯ್ಕ, ಯುವಜನಸೇವಾ ಮತ್ತು ಕ್ರೀಡಾಧಿಕಾರಿ ರಮೇಶ್, ಜಿಲ್ಲಾ ಉದ್ಯೋಗಾಧಿಕಾರಿ ಕಲಂದರ್ ಮತ್ತಿತರರು ಉಪಸ್ಥಿತರಿದ್ದರು.