ಎಚ್‍ಐವಿ, ಏಡ್ಸ್ ಬಗ್ಗೆ ಅರಿವು ಮೂಡಿಸಿ: ಕೊಡಗು ಪ್ರಭಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ

Update: 2019-01-14 17:24 GMT

ಮಡಿಕೇರಿ, ಜ.14 : ವಿವಿಧ ಇಲಾಖೆಗಳ ವತಿಯಿಂದ ಕಾರ್ಯಕ್ರಮಗಳು ನಡೆಯುವ ಸಂದರ್ಭ ಎಚ್‍ಐವಿ ಮತ್ತು ಏಡ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಪ್ರಬಾರ ಜಿಲ್ಲಾಧಿಕಾರಿ ಕೆಲಕ್ಷ್ಮೀಪ್ರಿಯ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಚ್‍ಐವಿ/ಏಡ್ಸ್ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಎಚ್‍ಐವಿ/ಏಡ್ಸ್ ಬರುವುದಕ್ಕೂ ಮೊದಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಮಾಹಿತಿ ಇರಬೇಕು ಎಂದರು.    
ಎಚ್‍ಐವಿ/ಏಡ್ಸ್ ನಿಯಂತ್ರಣ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ನೀಡುವುದು, ಸಾಕ್ಷ್ಯಚಿತ್ರದ ಮೂಲಕ ಜಾಗೃತಿ ಮೂಡಿಸುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಪ್ರತೀ ತಿಂಗಳು ಹಮ್ಮಿಕೊಳ್ಳುವಂತೆ ಅವರು ಸಲಹೆ ಮಾಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಎಚ್‍ಐವಿ/ಏಡ್ಸ್ ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳು ಸಹ ಕೈಜೋಡಿಸುವಂತಾಗಬೇಕು. ಹಾಗೆಯೇ ಎಚ್‍ಐವಿ/ಏಡ್ಸ್ ಪೀಡಿತರಿಗೆ ವಿವಿಧ ಇಲಾಖೆಗಳಿಂದ ಒದಗಿಸಲಾಗುವ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಅವರು ತಿಳಿಸಿದರು.   

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಅವರು ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಡಿಸೆಂಬರ್ ಅಂತ್ಯದವರೆಗೆ 115 ಪೋಸಿಟಿವ್ ಪ್ರಕರಣಗಳು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು. ಎಚ್.ಐ.ವಿ/ಏಡ್ಸ್ ನಿಯಂತ್ರಣ ಸಂಬಂಧಿಸಿದಂತೆ ರೇಡಿಯೋ ಕಾರ್ಯಕ್ರಮ, ಗೋಡೆ ಬರಹ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.    

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಆನಂದ್, ಜಿಲ್ಲಾಸ್ಪತ್ರೆಯ ಡಾ.ಮಂಜುನಾಥ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರಾದ ಎಸ್.ಸದಾಶಿವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ರಾಧ, ಕಾರ್ಯಕ್ರಮ ಅಧಿಕಾರಿ ಮಮ್ತಾಜ್, ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಐಟಿಡಿಪಿ ಇಲಾಖೆಯ ರಂಗನಾಥ್ ಇತರರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಆಹಾರ ಪೂರೈಸುವುದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಧನಶ್ರೀ ಯೋಜನೆಯಡಿ ಸಹಾಯಧನ ಕಲ್ಪಿಸುವುದು ಮತ್ತಿತರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News