ಮಡಿಕೇರಿ: ರೇವ್ ಪಾರ್ಟಿ ಅಡ್ಡೆಗೆ ಪೊಲೀಸ್ ದಾಳಿ; ಐವರ ಬಂಧನ

Update: 2019-01-14 17:37 GMT

ಮಡಿಕೇರಿ, ಜ.14: ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಹೋಂಸ್ಟೇ ಒಂದರಲ್ಲಿ ರೇವ್ ಪಾರ್ಟಿ ನಡೆಸುವುದರೊಂದಿಗೆ ಹಲವು ಬಗೆಯ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ಹೋಂಸ್ಟೇ ಮಾಲಕ ಸೇರಿದಂತೆ ಐವರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಬಂಧಿಸಿದ್ದು, ಆರೋಪಿಗಳಿಂದ ಮಾದಕ ವಸ್ತು ಹಾಗೂ 1.75 ಲಕ್ಷ ರೂ. ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಜೂಡ್ ಪೆರೇರಾ(32) ಶಂಕರ್ ಶಾಂತನು(29), ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‍ನ ಸಾಯಿರಾಂ (24) ಮತ್ತಿಕೆರೆಯ ಎಂ.ವಿ.ಈಶ್ವರ್ (33) ಹಾಗೂ ಹೋಂಸ್ಟೇ ಮಾಲಕ ಮಾಳೆಯಂಡ ಎ.ಅಪ್ಪಣ್ಣ (34) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 205.15 ಗ್ರಾಂ ಗಾಂಜಾ ಸೊಪ್ಪು, 29 ಗ್ರಾಂ ಚರಸ್, ಹುಕ್ಕ ಸೇದಲು ಉಪಯೋಸುವ 3 ಸಾಧನ, ಗಾಂಜಾ ಪುಡಿ ಮಾಡಲು ಉಪಯೋಗಿಸುವ 3 ಸಾಧನ, ಎರಡು ಅತೀ ಸಣ್ಣ ತೂಕದ ಸಾಧನ, 17 ಸಿಗರೇಟ್ ತಯಾರಿಸಲು ಉಪಯೋಗಿಸುವ ಪೇಪರ್ ಪ್ಯಾಕೆಟ್ ಮತ್ತು ಫಿಲ್ಟರ್,  ಮೊಬೈಲ್ ಫೋನ್‍ಗಳು ಹಾಗೂ ಮಾದಕವಸ್ತು ಮಾರಾಟ ಮಾಡಿ ಇಟ್ಟುಕೊಂಡಿದ್ದ ಒಟ್ಟು ರೂ. 1,75,500/- ರೂ ನಗದು, ರೇವ್ ಪಾರ್ಟಿಗೆ ಬಳಲಾಗುತ್ತಿದ್ದ ಲಕ್ಷಾಂತರ ಬೆಲೆಯ ಮ್ಯೂಸಿಕ್ ಸಿಸ್ಟಮ್, ಜನರೇಟರ್ ಹಾಗೂ ಅಶೋಕ ಲೈಲಂಡ್ ಮಿನಿ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಯಶಸ್ವಿ ಕಾರ್ಯಾಚರಣೆ
ಕೊಡಗು ಜಿಲ್ಲೆಯಲ್ಲಿ ಜನನಿಬಿಡ ಪ್ರದೇಶದಲ್ಲಿರುವ ಕೆಲವು ಹೋಂಸ್ಟೇಗಳಲ್ಲಿ ರೇವ್ ಪಾರ್ಟಿಗಳನ್ನು ತಡರಾತ್ರಿ ನಡೆಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಅಂತಹ ಪಾರ್ಟಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪಾರ್ಟಿ ಆಯೋಜಕರ ಮಾಹಿತಿ ಕಲೆ ಹಾಕಿ ದಾಳಿ ನಡೆಸುವಂತೆ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ನಿರ್ದೇಶನ ನೀಡಿದ್ದರು. ಅದರಂತೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿಯ ಹೋಂಸ್ಟೇಯ ಮಾಲಕರೊಂದಿಗೆ ಶಾಮೀಲಾಗಿ ಬಾಂಬೆ, ಪೂನಾ ಹಾಗೂ ಬೆಂಗಳೂರಿನ ಕೆಲವು ವ್ಯಕ್ತಿಗಳು ರೇವ್ ಪಾರ್ಟಿ ಆಯೋಜಿಸಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಮಾಹಿತಿ ಕಲೆ ಹಾಕುವುದರೊಂದಿಗೆ, ಈ ಮಾಹಿತಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ರವಾನಿಸಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶದಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಜ.12ರಂದು ಡಿಸಿಐಬಿ ಸಿಬ್ಬಂದಿ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಹಾಗೂ ಎಎನ್‍ಎಸ್ ತಂಡದ ಓರ್ವ ಸಿಬ್ಬಂದಿಯ ತಂಡ ದಾಳಿ ನಡೆಸಿ  ಮುಂಬೈ ಹಾಗೂ ಪೂನಾದ ತಲಾ ಒಬ್ಬರು ಹಾಗೂ ಬೆಂಗಳೂರಿನ ಇಬ್ಬರು ವ್ಯಕ್ತಿಗಳನ್ನು ಮತ್ತು ಹೋಂಸ್ಟೇ ಮಾಲಕರನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರ ಪೈಕಿ ಜೂಡ್ ಪರೇರಾ ಮಹಾರಾಷ್ಟ್ರದ ಪೂನಾ ಜಿಲ್ಲೆಯ ನಿವಾಸಿಯಾಗಿದ್ದು, ಎಡಿಪಿ ಕಂಪೆಯಲ್ಲಿ ಮುಖ್ಯ ಹೆಚ್.ಆರ್.ಡಿ ಅಧಿಕಾರಿ ಎನ್ನಲಾಗಿದೆ. ಶಂಕರ್ ಶಾಂತನು ಪಶ್ಚಿಮ ಮುಂಬೈ ನಿವಾಸಿ ಹಾಗೂ ಅಲ್ಲಿನ ಆಕ್ಸಿಸ್ ಬ್ಯಾಂಕ್‍ನಲ್ಲಿ ಅಡ್ಮಿನಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಲಾಗಿದೆ. 
ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಿವಾಸಿ ಸಾಯಿರಾಮ್ ಪೈಂಟರ್ ವೃತ್ತಿಯಲ್ಲಿದ್ದರೆ, ಮತ್ತಿಕೆಯೆ ನಿವಾಸಿ ಎಂ.ವಿ.ಈಶ್ವರ್ ಎ.ಸಿ ಸರ್ವೀಸ್ ಇಂಜಿನಿಯರ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಳೆಯಂಡ ಎ.ಅಪ್ಪಣ್ಣ ನೆಲಜಿಯಲ್ಲಿ ಕೃಷಿಕರಾಗಿದ್ದು, ಪ್ರಸ್ತುತ ಹೋಂಸ್ಟೇಯ ಮಾಲಕರಾಗಿದ್ದಾರೆ.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ಮಹೇಶ್, ನಾಪೋಕ್ಲು ಪೊಲೀಸ್ ಠಾಣಾ ಠಾಣಾಧಿಕಾರಿ ಎಂ.ನಂಜುಂಡಸ್ವಾಮಿ, ಎಎಸ್‍ಐ ಕೆ.ವೈ.ಹಮೀದ್, ಸಿಬ್ಬಂದಿಗಳಾದ ಎಂ.ಎನ್.ನಿರಂಜನ, ಬಿ.ಎಲ್.ಯೋಗೇಶ್ ಕುಮಾರ್, ವಿ.ಜಿ.ವೆಂಕಟೇಶ್, ಕೆ.ಆರ್.ವಸಂತ, ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಶಿವರಾಜೇಗೌಡ, ದಿನೇಶ್, ಎಎನ್‍ಎಸ್ ತಂಡದ ಅವಿನಾಶ್, ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಮತ್ತು ಚಾಲಕ ಶಶಿಕುಮಾರ್  ಪಾಲ್ಗೊಂಡಿದ್ದರು.

ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುವ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಮಾಹಿತಿ ನೀಡಲು ಮನವಿ
ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಮಾದಕ ವಸ್ತುಗಳ ಜಾಲದಲ್ಲಿ ಸೆಳೆದುಕೊಂಡು ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಂಜಾ ಅಥವಾ ಯಾವುದೇ ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಎಸ್‍ಐರವರಿಗಾಗಲೀ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಅವರು ಕೋರಿದ್ದಾರೆ. ಇದಲ್ಲದೆ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡುವ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವುದಿಲ್ಲ, ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಟ್ಟು ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News