×
Ad

ಮಡಿಕೇರಿ ನಗರ ಬಿಜೆಪಿಗೆ ಮಿನಾಝ್ ಪ್ರವೀಣ್ ರಾಜೀನಾಮೆ

Update: 2019-01-14 23:35 IST

ಮಡಿಕೇರಿ, ಜ.14: ಮಡಿಕೇರಿ ನಗರ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಿನಾಝ್ ಪ್ರವೀಣ್ ತಮ್ಮ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯೊಳಗಿನ ಗೊಂದಲದ ವಾತಾವರಣದಿಂದ ಬೇಸತ್ತು ಬಿಜೆಪಿ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ಮಿನಾಝ್ ಪ್ರವೀಣ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. 

ಬಿಜೆಪಿ ಪಕ್ಷದಲ್ಲಿ ಕಳೆದ 5 ವರ್ಷಗಳಿಂದ ಜಿಲ್ಲಾ ಸಾಮಾಜಿಕ ಜಾಲತಾಣದ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ನಮೋ ಗ್ರೂಪ್‍ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಮತ್ತು ಮಡಿಕೇರಿ ನಗರದ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಉತ್ತಮ ರೀತಿಯಲ್ಲಿ ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದ್ದೇನೆ. 

ಕಳೆದ ನಗರಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ನಾನು ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ ಪಕ್ಷದ ಕೆಲವು ಹಿತ ಶತ್ರುಗಳ ಒಳಸಂಚಿನಿಂದ ಟಿಕೆಟ್ ಕೈ ತಪ್ಪುವ ಎಲ್ಲಾ ಸಾಧ್ಯತೆಗಳಿತ್ತಲ್ಲದೆ, ನಾನು ಒಂದು ವೇಳೆ ಸ್ಪರ್ಧಿಸಿದರೂ ಸೋಲಿಸುವುದಾಗಿ ಪಕ್ಷದೊಳಗಿನ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ಮಿನಾಝ್ ಪ್ರವೀಣ್ ಆರೋಪಿಸಿದ್ದಾರೆ.

ಬಿಜೆಪಿ ಮಹಿಳಾ ಘಟಕದ ಕೆಲವು ಪದಾಧಿಕಾರಿಗಳು ನನ್ನನ್ನು ತೇಜೋವಧೆ ಮಾಡುತ್ತಿದ್ದು, ಈ ಎಲ್ಲಾ ಕಾರಣಗಳಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News