ಅನಿಯಮಿತ ಚಲನೆ ವಿರುದ್ಧ ಕಠಿಣ ಕ್ರಮಕ್ಕೆ ಹಿಂಜರಿಯೆವು: ಸೇನಾ ವರಿಷ್ಠ ಬಿಪಿನ್ ರಾವತ್

Update: 2019-01-15 15:48 GMT

ಹೊಸದಿಲ್ಲಿ, ಜ. 15: ಅನಿಯಮಿತ ಚಲನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತ ಹಿಂಜರಿಯದು ಎಂದು ಸೇನಾ ವರಿಷ್ಠ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಸೇನೆ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ಅವರಿಗೆ ಸಾಕಷ್ಟು ನಷ್ಟ ಉಂಟು ಮಾಡಿದೆ. ಯಾವುದೇ ಚಲನೆಗೆ ಕಠಿಣ ಕ್ರಮ ಕೈಗೊಳ್ಳಲು ಸೇನೆ ಹಿಂಜರಿಯದು ಎಂದು ನಾನು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಪಶ್ಚಿಮ ಗಡಿಯಲ್ಲಿ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ಪ್ರಾಬಲ್ಯ ಹೊಂದಿದೆ ಹಾಗೂ ಇದನ್ನು ಮುಂದುವರಿಸಲಿದೆ ಎಂದು ಅವರು ಭರವಸೆ ನೀಡಿದರು.

ದಿಲ್ಲಿಯಲ್ಲಿ ನಡೆದ ಸೇನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘‘ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತೊಂದರೆ ಉಂಟು ಮಾಡಲು ನಾವು ಬಯಸುವುದಿಲ್ಲ. ಭಯೋತ್ಪಾದನ ಚಟುವಟಿಕೆಯಲ್ಲಿ ಪಾಕಿಸ್ತಾನದ ಕೈವಾಡ ಇದೆ. ಪಾಕಿಸ್ತಾನ ಉಗ್ರರಿಗೆ ತರಬೇತಿ ನೀಡುತ್ತದೆ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ’’ ಎಂದು ಅವರು ಹೇಳಿದ್ದಾರೆ.

ಚೀನಾದೊಂದಿಗಿನ ಗಡಿಯ ಬಗ್ಗೆ ಉಲ್ಲೇಖಿಸಿದ ಅವರು, ಚೀನಾ ಹಾಗೂ ಭಾರತ ತಮ್ಮ ಸೇನೆಗಳಿಗೆ ನೂತನ ಮಾರ್ಗಸೂಚಿಗಳನ್ನು ನೀಡಿದೆ ಎಂದರು

 ಪೂರ್ವ ಗಡಿಯಲ್ಲಿ ಶಾಂತಿ ಕಾಪಾಡಲು ಕ್ರಮಗಳು ಮುಂದುವರಿದಿವೆ. ಆದರೆ, ನಾವು ಪರಿಸ್ಥಿತಿಯ ಪುನರ್ ಪರಿಶೀಲನೆ ಮಾಡಲಿದ್ದೇವೆ. ಪೂರ್ವ ವಲಯದಲ್ಲಿ ಗಡಿ ಕಾಯುವಲ್ಲಿ ನಮ್ಮ ಯೋಧರು ಯಾವುದೇ ರಾಜಿ ಮಾಡಿಕೊಳ್ಳಲಾರರು ಎಂದು ಜನರಲ್ ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News