ಎಂ.ಬಿ.ಪಾಟೀಲ್ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು: ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗ ಒತ್ತಾಯ

Update: 2019-01-15 18:06 GMT

ದಾವಣಗೆರೆ,ಜ.15: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಡಾ.ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗ ಒತ್ತಾಯಿಸಿದೆ. 

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಳಗದ ದಲಿತ ಮುಖಂಡ ಬಿ.ಎಚ್.ವೀರಭದ್ರಪ್ಪ, 1974ರಲ್ಲಿ ನಗರಸಭೆ ಅಧ್ಯಕ್ಷರಾದಾಗಿನಿಂದಲೂ ಶಾಮನೂರು ಶಿವಶಂಕರಪ್ಪ ಜೊತೆಗೆ ತಮ್ಮೆಲ್ಲರ ಒಡನಾಟವಿದ್ದು, ಯಾರ ಗಂಟನ್ನೇನೂ ಹೊಡೆದು ಅವರು ಈ ಮಟ್ಟಕ್ಕೆ ಬೆಳೆದಿಲ್ಲ ಎಂಬುದನ್ನು ಎಂ.ಬಿ. ಪಾಟೀಲ್ ಅರಿಯಲಿ. ವಿಜಯಪುರ ಜಿಲ್ಲೆಯಲ್ಲಿ ಇಂದಿಗೂ ದಲಿತರಿಗೆ ಪ್ರತ್ಯೇಕ ತಟ್ಟೆ, ಲೋಟಗಳನ್ನು ಹೋಟೆಲ್‍ಗಳಲ್ಲಿಡಲಾಗಿದೆ. ಗೃಹ ಸಚಿವ ಎಂ.ಬಿ.ಪಾಟೀಲ್ ರಂತೆ ಜಾತಿ ರಾಜಕಾರಣ ಮಾಡುವ ವ್ಯಕ್ತಿತ್ವ ಶಿವಶಂಕರಪ್ಪನವರದ್ದಲ್ಲ. ಸಾವಿರಾರು ಜನರಿಗೆ ಜಾತಿ, ಧರ್ಮವನ್ನೂ ನೋಡದೇ ಕೆಲಸ ನೀಡುವ ಮೂಲಕ ಬದುಕನ್ನು ಕಟ್ಟಿಕೊಟ್ಟಿದ್ದಾರೆ ಎಂದರು. 

ತಕ್ಷಣವೇ ಎಂ.ಬಿ.ಪಾಟೀಲ್ ಹಿರಿಯರಾದ ಶಾಮನೂರು ಶಿವಶಂಕರಪ್ಪ ಬಳಿ ಬಹಿರಂಗ ಕ್ಷಮೆಯಾಚಿಸಲಿ. ಇಲ್ಲದಿದ್ದರೆ ಅವರ ವಿರುದ್ದ ಜ.20ರಂದು ಸುಮಾರು 10-15 ಸಾವಿರ ಮಂದಿ ಶಾಮನೂರು ಅಭಿಮಾನಿಗಳು, ಹಿತೈಷಿಗಳು ಇಲ್ಲಿನ ಕಾಯಿಪೇಟೆ ಶ್ರೀ ಬಸವೇಶ್ವರ ಪುತ್ಥಳಿ ಬಳಿ ಧರಣಿ ನಡೆಸಲಿದ್ದಾರೆ ಎಂದು ಹೇಳಿದರು. 

ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ ಮಾತನಾಡಿ, ವೀರಶೈವ ಲಿಂಗಾಯತ ಎರಡೂ ಒಂದೇ. ಚುನಾವಣೆ ವೇಳೆ ಸ್ವತಂತ್ರ ಧರ್ಮದ ಧ್ವನಿ ಕೇಳಿ ಬಂದು, ಚುನಾವಣೆ ಮುಗಿಯುತ್ತಿದ್ದಂತೆ ನಿಲ್ಲುತ್ತದೆಂದು ಶಾಮನೂರು ಶಿವಶಂಕರಪ್ಪ ಚುನಾವಣೆ ಪೂರ್ವದಲ್ಲೇ ಹೇಳಿದ್ದರು. ಸ್ವತಂತ್ರ ಧರ್ಮದ್ದು ರಾಜಕೀಯಲಾಭದ ಹೋರಾಟವಷ್ಟೇ ಎಂದಿದ್ದು, ಮೊನ್ನೆ ಸಹ ಪಂಚಪೀಠಾಧೀಶರ ಸಮಾರಂಭದಲ್ಲೂ ಇದೇ ಮಾತನ್ನೇ ಶಿವಶಂಕರಪ್ಪ ಪುನರುಚ್ಛರಿಸಿದ್ದರು. ಧರ್ಮ ಒಡೆಯುವ ಪ್ರಯತ್ನ ಸರಿಯಲ್ಲವೆಂದು ಆಕ್ಷೇಪಿಸಿದ್ದರು ಎಂದರು.  

ದೇವರಮನಿ ಶಿವಕುಮಾರ ಮಾತನಾಡಿ, ಶಾಮನೂರು ಶಿವಶಂಕರಪ್ಪ ರಾಜಕೀಯದಿಂದ ಕಾಯಕ ಮಾಡಿದವರಲ್ಲ. ಕಾಯಕ ಮಾಡಿದ ನಂತರವೇ ರಾಜಕೀಯ ಮಾಡಿದವರು. ವರ್ತಕರಾಗಿ, ಉದ್ಯಮಿಯಾಗಿ, ರಾಜಕೀಯ ನಾಯಕನಾಗಿ ಹಂತ ಹಂತವಾಗಿ ಬೆಳೆದವರು. ಬಾಪೂಜಿ ವಿದ್ಯಾಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ಶಾಮನೂರು ಕೊಡುಗೆ ದೊಡ್ಡದು. ಸಾವಿರಾರು ಜನರಿಗೆ ಕೆಲಸವ ನೀಡುವ ಮೂಲಕ ಎಲ್ಲಾ ಜಾತಿ, ವರ್ಗ, ಧರ್ಮದ ಜನರ ನೆಚ್ಚಿನ ನಾಯಕನಾಗಿದ್ದಾರೆ ಎಂದರು. 

ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಸೈಯದ್ ಸೈಫುಲ್ಲಾ, ಉಪ ಮೇಯರ್ ಕೆ.ಚಮನ್ ಸಾಬ್, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಸದಸ್ಯರಾದ ಎಂ.ಹಾಲೇಶ, ಗೌಡ್ರ ಚನ್ನಬಸಪ್ಪ, ಬೆಲ್ಲದ ಶಂಕರ, ಕೆ.ಜಿ.ಶಿವಕುಮಾರ, ವಕೀಲರಾದ ನೇತ್ರಾವತಿ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News