ಬಿಜೆಪಿಯ 'ಆಪರೇಷನ್ ಕಮಲ' ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಸಿದ್ದರಾಮಯ್ಯ

Update: 2019-01-16 15:43 GMT

ಚಿಕ್ಕಮಗಳೂರು, ಜ.16: ಬಿಜೆಪಿಯವರು ಆಪರೇಷನ್ ಕಮಲ ನಡೆಸುವ ಮೂಲಕ ಪದೇಪದೇ ಸರ್ಕಾರವನ್ನು ಬೀಳಿಸುವ ಯತ್ನವನ್ನು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಅವರು ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದವರಿಗೆ ನಾಚಿಕೆಯಾಗಲಿ, ಮಾರ್ಯಾದೆಯಾಗಲಿ ಇಲ್ಲದಾಗಿದೆ. ನೀತಿ ಪಾಠ ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಒಂದು ರಾಜ್ಯ ಸರ್ಕಾರವನ್ನು ಬೀಳಿಸುವ ನೀಚ ಕೆಲಸಕ್ಕೆ ಕೈ ಹಾಕಿ, ಬಿಜೆಪಿ ನೀತಿ ಸಿದ್ದಾಂತ ಎಂದು ಜನರಿಗೆ ಹೇಳುತ್ತಾ ವಾಮಮಾರ್ಗ ಹಿಡಿದಿರುವುದು ಎಂದಿಗೂ ಫಲಿಸುವುದಿಲ್ಲ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ನಾವೇ ಅವಧಿಯನ್ನು ಪೂರ್ಣಗೊಳಿಸಲಿದ್ದೇವೆ. ಬಿಜೆಪಿ ಪಕ್ಷದವರಿಗೆ ಭ್ರಮನಿರಸನವಾಗಿದೆ. ಶಾಸಕರಿಗೆ 25 ರಿಂದ 50 ಕೋಟಿರೂ ಕೊಡುವ ಆಮಿಷವೊಡ್ಡುತ್ತಿದ್ದು. ಇದು ಯಾವ ಹಣ? ಈ ಹಣ ಭ್ರಷ್ಟಚಾರದ ಹಣವಲ್ಲವೇ ಎಂದು ಪ್ರಶ್ನಿಸಿದರು. ಬೇರೆ ಪಕ್ಷದವರನ್ನು ಹಣಕೊಟ್ಟು ಕೊಂಡುಕೊಳ್ಳುವ ತಂತ್ರಗಾರಿಕೆಗೆ ಯಾವುದೇ ಶಾಸಕರು ಬಲಿಯಾಗುವುದಿಲ್ಲ. ಇದೊಂದು ಪ್ರಹಸನದ ಕಾರ್ಯವಾಗಿದೆ. ನಮ್ಮ ಪಕ್ಷದ ಶಾಸಕರು ವೈಯಕ್ತಿಕವಾಗಿ ಬಾಂಬೆಗೆ ಹೋಗಿದ್ದಾರೆ. ಅವರು ಯಾರೂ ಎಲ್ಲಿಗೂ ಹೋಗಬಾರದೆ? ಬಿಜೆಪಿಯವರಿಗೆ ಮೌಲ್ಯಗಳೇ ಇಲ್ಲದಾಗಿದೆ ಎಂದರು.

ರಮೇಶ್ ಜಾರಕಿಹೊಳಿ ಅವರು ನಾನು ಬಿಜೆಪಿಗೆ ಹೋಗುತ್ತೇನೆ, ಕಾಂಗ್ರೆಸ್ ಬಿಡುತ್ತೇನೆ ಎಂದು ಎಲ್ಲಿಯಾದರೂ ಹೇಳಿಕೆ ನೀಡಿದ್ದಾರೆಯೇ ? ಬಿಜೆಪಿ ಪಕ್ಷದ 104 ಶಾಸಕರನ್ನು ದೆಹಲಿಯಲ್ಲಿ ಬಂಧನದಲ್ಲಿ ಇಟ್ಟಿರುವುದು ಯಡಿಯೂರಪ್ಪನವರಿಗೆ ಶೋಭೆ ತರುವಂಥಹದ್ದಲ್ಲ ಎಂದರು. ತುರ್ತಾಗಿ ಮುಖ್ಯಮಂತ್ರಿಯಾಗಬೇಕು ಎಂದು ಆಶಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಜನ ಬಹುಮತ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿಯಾಗಲಿ ಇನ್ಯಾವುದೇ ನಮ್ಮ ಪಕ್ಷದ ಶಾಸಕರಾಗಲಿ ಎಲ್ಲಿಗೂ ಹೋಗಿಲ್ಲ. ಇದೆಲ್ಲಾ ಊಹಾಪೋಹ ಎಂದರು.

ಬಿಜೆಪಿಯವರು ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಬೆಂಬಲಿತ ಶಾಸಕರನ್ನು ಸೆಳೆಯುವ ಯತ್ನದಲ್ಲಿದ್ದಾರೆ. ಆದರೆ ನಮ್ಮ ಜೊತೆಯಲ್ಲಿಯೂ ಬಿಜೆಪಿ ಬೆಂಬಲಿತ ಬಹಳಷ್ಟು ಮಂದಿ ಶಾಸಕರಿದ್ದಾರೆ. ಆದರೆ ಅವರಂತೆ ನಾವು ಮಾಡುವುದಿಲ್ಲ ಎಂದರು.

ಬಿಜೆಪಿಯವರಿಗೆ ಜನ ಅಧಿಕಾರಿ ಮಾಡಿ ಎಂದು ತೀರ್ಪು ಕೊಟ್ಟಿಲ್ಲ. ಆದರೂ ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಸರ್ಕಾರವನ್ನು ಅಭದ್ರಗೊಳಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಫಲಿಸುವುದಿಲ್ಲ ಎಂದರು. ಪ್ರತಿ ಹಬ್ಬಗಳು ಬಂದಾಗಲೂ ಸಂಕ್ರಾಂತಿಗೆ ಗಿಫ್ಟ್ ಕೊಡುತ್ತೇವೆ, ಯುಗಾದಿಗೆ ಗಿಫ್ಟ್ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂದು ಕುಟುಕಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರಿಗೆ ವಿರೋಧ ಪಕ್ಷದಲ್ಲಿ ಕುಳಿತು ಕಾರ್ಯನಿರ್ವಹಿಸುವಂತೆ ತೀರ್ಪು ನೀಡಿದ್ದಾರೆ. ಅದರಂತೆ ಅವರು ವಿರೋಧ ಪಕ್ಷದಲ್ಲಿ ಕುಳಿತು ಕಾರ್ಯನಿರ್ವಹಿಸುವ ಬದಲು ವಾಮ ಮಾರ್ಗದ ಮೂಲಕ ಮುಖ್ಯಮಂತ್ರಿಯಾಗಲು ಶಾಸಕರಿಗೆ ಕೋಟ್ಯಾಂತರ ರೂಪಾಯಿಗಳ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರನ್ನು ರೆಸಾರ್ಟ್‍ನಲ್ಲಿ ಕೂಡಿ ಹಾಕಿ ನಾಳೆ ಸರ್ಕಾರ ಮಾಡುತ್ತೀವಿ, ನಾಡಿದ್ದು ಸರ್ಕಾರ ಮಾಡುತ್ತೀವಿ ಎಂದು ಬರೀ ಸುಳ್ಳು ಹೇಳುತ್ತಿದ್ದಾರೆ. ಏನೇ ಹೇಳಿದರೂ ಅದೆಲ್ಲಾ ಸುಳ್ಳು. ಮಾಧ್ಯಮದವರು ಅವರ ಮಾತನ್ನು ಸುಳ್ಳೆಂದು ಪ್ರಚಾರ ಮಾಡಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News