ಕೊಡಗು ಜಿಲ್ಲೆ: ಭೂಕುಸಿತದಿಂದ ಹಾನಿಗೊಳಗಾದ 840 ಕುಟುಂಬಗಳಿಗೆ ವಸತಿ ಸೌಲಭ್ಯ

Update: 2019-01-16 16:07 GMT

ಬೆಂಗಳೂರು, ಜ.16: ಕೊಡಗು ಜಿಲ್ಲೆಯಲ್ಲಿ ನೆರೆಹಾವಳಿ ಹಾಗೂ ಭೂಕುಸಿತದಿಂದ ಹಾನಿಗೊಳಗಾದ 840 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಪ್ರತಿ ಮನೆಗೆ ಅಂದಾಜು ರೂ 9.85 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಹಾಗೂ ಒಟ್ಟಾರೆ ಯೋಜನೆಗೆ 8,274 ಲಕ್ಷ ರೂ.ಮೊತ್ತದಲ್ಲಿ ನಿರ್ವಹಿಸಲು ಸರಕಾರದಿಂದ ನ.27, 2018ರಂದು ಅನುಮೋದನೆ ನೀಡಲಾಗಿದೆ.

ಈ ಮನೆಗಳ ನಿರ್ಮಾಣ ಕಾಮಗಾರಿಯನ್ನು ನಿರ್ಮಾಣ ಸಂಸ್ಥೆಯಾದ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರಕ್ಕೆ ವಹಿಸಲಾಗಿದೆ. ಇದಲ್ಲದೇ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಒಟ್ಟು 31.63 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲು ಸರಕಾರ ಒಪ್ಪಿಗೆ ನೀಡಿದೆ.

ಮನೆ ನಿರ್ಮಾಣದ ಅಂದಾಜು ವೆಚ್ಚದಲ್ಲಿ ಸಹಾಯಧನದ ಮೊತ್ತ (ವಿವಿಧ ವಸತಿ ಯೋಜನೆಗಳಡಿ ನೀಡಲಾಗುವ ಸಹಾಯಧನ) 1,111 ಲಕ್ಷ ರೂ. ಗಳನ್ನು ಹಾಗೂ ಬಾಕಿ 7,163 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಸಂಸ್ಥೆಗೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ.

ನಿರ್ಮಾಣ ಸಂಸ್ಥೆಯಾದ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರದಿಂದ ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ ಪ್ರದೇಶಗಳಲ್ಲಿ ಕೂಡಲೇ ಮನೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಸಂತ್ರಸ್ಥರಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಮನೆ ನಿರ್ಮಾಣ ಕಾಮಗಾರಿಗಳ ಪ್ರದೇಶ/ಬಡಾವಣೆ ಮತ್ತು ಛಾಯಾಚಿತ್ರಗಳು, ನಿಗಮದ ವೆಬ್‌ಸೈಟ್ https://ashraya.karnataka.gov.in ನಲ್ಲಿ ಲಭ್ಯವಿದ್ದು, ವೀಕ್ಷಿಸಬಹುದಾಗಿದೆ ಎಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News