ಭಾಷೆ ಉಳಿದರೆ ಮಾತ್ರ ಸಂಸ್ಕೃತಿಯ ಬೆಳವಣಿಗೆ: ಸಚಿವ ಯು.ಟಿ.ಖಾದರ್

Update: 2019-01-16 16:50 GMT

ಮಡಿಕೇರಿ, ಜ.16: ಭಾಷೆ ನಾಶವಾದರೆ ಒಂದು ಸಂಸ್ಕೃತಿಯೇ ನಾಶವಾದಂತೆ. ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಭಾಷೆ ಪೂರಕವಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಾವೇರಿಹಾಲ್‍ನ ಜ.ಹಬೀಬ್ ಲಾಯರ್ ವೇದಿಕೆಯಲ್ಲಿ ನಡೆದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಬ್ಯಾರೀಸ್ ವೆಲ್ ಫೇರ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಬ್ಯಾರಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯ ಏನನ್ನಾದರು ಸಾಧಿಸಿ ಹೋಗಬೇಕು, ಸಾಮಾಜಿಕ ಕಳಕಳಿಯೊಂದಿಗೆ ಶಾಂತಿ, ಸೌಹಾರ್ದತೆಯ ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಭಾಷೆ ಸಂಬಂಧಗಳನ್ನು ಬೆಸೆಯುವ ಸಾಧನವಾಗಿದ್ದು, ಸಂಸ್ಕೃತಿಯ ಅನಾವರಣಕ್ಕೂ ಭಾಷೆ ಅತಿ ಮುಖ್ಯವಾಗಿದೆ. ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯವೆಂದ ಖಾದರ್, ಭಾಷಾ ಸೌಹಾರ್ದತೆಯ ಕುರಿತು ಮಕ್ಕಳಲ್ಲಿ ಪ್ರೇರಣೆ ತುಂಬಬೇಕು ಎಂದರು.  

ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯರ ಕೊಡುಗೆ ಅಪಾರವಾಗಿದೆ. ಇದನ್ನು ಉಳಿಸಿ ಬೆಳೆಸುವ ಭಾರ ಯುವ ಸಮೂಹದ ಮೇಲಿದೆ ಎಂದು ಕಿವಿಮಾತು ಹೇಳಿದರು. ಶಾಂತಿ, ಸೌಹಾರ್ದತೆ, ಆತ್ಮ ವಿಶ್ವಾಸದೊಂದಿಗೆ ಭಾಷೆಗಳನ್ನು ಗೌರವಿಸುತ್ತಾ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದು ಸಚಿವರು ಹೇಳಿದರು.

ಬ್ಯಾರೀಸ್ ವೆಲ್ ಫೇರ್ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂಶುದ್ದೀನ್ ಮಾತನಾಡಿ, ಉನ್ನತ ಶಿಕ್ಷಣದೊಂದಿಗೆ ಸಮುದಾಯದ ಯುವ ಸಮೂಹ ಪ್ರಗತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು. ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಪ್ರತಿಭೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರನ್ನು ಸನ್ಮಾನಿಸಿ, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ.ಹಸನಬ್ಬ, ಮಾಜಿ ಸಚಿವ ಎಂ.ಸಿ.ನಾಣಯ್ಯ ಮತ್ತಿತರ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News