ಚಿಕ್ಕಮಗಳೂರು: ಪರಿಷ್ಕೃತ ಮತಗಟ್ಟೆ, ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ

Update: 2019-01-16 16:58 GMT

ಚಿಕ್ಕಮಗಳೂರು, ಜ.16: ರಾಜ್ಯದ ವಿಧಾನಸಭೆಗೆ ನಡೆದ 2018ರ ಸಾರ್ವತ್ರಿಕ ಚುನಾವಣೆ ಸಂದರ್ಭ ಜಿಲ್ಲೆಯ ಐದು ವಿಧಾನಸಭಾ ಕ್ಷೆತ್ರಗಳಿಂದ 1,170 ಮತಗಟ್ಟೆಗಳಿದ್ದವು. ಈ ಸಂಬಂಧ 2018 ಸೆಪ್ಟೆಂಬರ್ ನಲ್ಲಿ ಮತಗಟ್ಟೆಗಳ ಪುನರ್ವಿಂಗಡಣೆ ಮಾಡಲಾಗಿದ್ದು, ಮತದಾರರು ಹೆಚ್ಚಿರುವ ಮತಗಟ್ಟೆಗಳನ್ನು ವಿಂಗಡಿಸಿ ಹೆಚ್ಚುವರಿಯಾಗಿ 52 ಮತಗಟ್ಟೆಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ ಜಿಲ್ಲೆ ಒಟ್ಟು 1,220 ಮತಗಟ್ಟೆಗಳನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಳಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಭದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಶೃಂಗೇರಿ ಕ್ಷೇತ್ರ 249 ಮತಗಟ್ಟೆಗಳನ್ನು ಹೊಂದಿದ್ದು, ಮತಗಟ್ಟೆಗಳ ಪುನರ್ ವಿಂಗಡಣೆ ವೇಳೆ ಈ ಕ್ಷೇತ್ರದಲ್ಲಿ ಹೆಚ್ಚವರಿಯಾಗಿ 7 ಮತಗಟ್ಟೆಗಳನ್ನು ಸೃಷ್ಟಿಸಲಾಗಿದೆ. ಸದ್ಯ ಈ ಕ್ಷೇತ್ರ 256 ಮತಗಟ್ಟೆಗಳನ್ನು ಹೊಂದಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಈ ಹಿಂದೆ 226 ಮತಗಟ್ಟೆಗಳಿದ್ದು, ಪುನರ್ವಿಂಗಡಣೆ ವೇಳೆ 5 ಹೆಚ್ಚುವರಿ ಮತಗಟ್ಟೆಗಳು ಸೇರ್ಪಡೆಯಾಗಿವೆ. ಸದ್ಯ ಈ ಕ್ಷೇತ್ರ 231 ಮತಗಟ್ಟೆಗಳನ್ನು ಹೊಂದಿದೆ. ಚಿಕ್ಕಮಗಳೂರು ಕ್ಷೇತ್ರ 238 ಮತಗಟ್ಟೆಗಳನ್ನು ಹೊಂದಿದ್ದು, 19 ಹೆಚ್ಚುವರಿ ಮತಗಟ್ಟೆಗಳ ಸೇರ್ಪಡೆಯೊಂದಿಗೆ ಒಟ್ಟು 256 ಮತಗಟ್ಟೆಗಳಾಗಿವೆ. ಈ ಕ್ಷೇತ್ರದ ಮುತ್ತೋಡಿ ಮತಗಟ್ಟೆಯಲ್ಲಿ ಮತದಾರರಿರದ ಕಾರಣಕ್ಕೆ ಈ ಮತಗಟ್ಟೆಯನ್ನು ತೆಗೆದು ಹಾಕಲಾಗಿದೆ. ತರೀಕರೆ ಕ್ಷೇತ್ರ 221 ಮತಗಟ್ಟೆಗಳನ್ನು ಹೊಂದಿದ್ದು, 7 ಹೆಚ್ಚುವರಿ ಮತಗಟ್ಟೆಗಳ ಸೇರ್ಪಡೆಯಾಗಿ ಒಟ್ಟು 228 ಮತಗಟ್ಟೆಗಳು ಹಾಗೂ ಕಡೂರು ಕ್ಷೇತ್ರ 236 ಮತಗಟ್ಟೆಗಳೊಂದಿಗೆ ಹೆಚ್ಚುವರಿ 14 ಮತಗಟ್ಟೆಗಳ ಸೇರ್ಪಡೆ ಮಾಡಲಾಗಿದ್ದು, ಒಟ್ಟು 250 ಮತಗಟ್ಟೆಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಎ.30, 2018ರಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 4,67,851 ಪುರುಷ ಮತದಾರರಿದ್ದು, 4,69,398 ಮಹಿಳಾ ಮತದಾರರು ಸೇರಿ ಒಟ್ಟು ಐದು ಕ್ಷೇತ್ರಗಳಲ್ಲಿ 9,37199 ಮತದಾರರಿದ್ದರು. ಎ.30, 2018ರಲ್ಲಿ ನಮೂನೆ 6,7,8 ಮತ್ತು 8 'ಎ' ನಲ್ಲಿ ಹೊಸಮತದಾರರ ಸೇರ್ಪಡೆಗೆ ಸ್ವೀಕರಿಸಿದ ಅರ್ಜಿಗಳನ್ನು ಪರಿಷ್ಕರಿಸಿ ಅಕ್ಟೋಬರ್ 10ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ನಂತರ ನಡೆದ ವಿಶೇಷ ಪರಿಷ್ಕರಣೆಯಲ್ಲಿ ಹೊಸದಾಗಿ 2916 ಪುರುಷರು, 3669 ಮಹಿಳೆಯರು ಸೇರಿ ಒಟ್ಟು 6585 ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರಿರುತ್ತಾರೆ.

ಇದೇ ವೇಳೆ 5208 ಪುರುಷರು, 5617 ಮಹಿಳೆಯರು ಹಾಗೂ ಇತರ 2 ಮತದಾರರು ಸೇರಿ 10,77 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದ ಅವರು, ಅ.10, 2018ರಿಂದ ಜ.16,2018ರ ಅವಧಿಯಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಜ.16ರಂದು ಬಿಡುಗಡೆ ಮಾಡಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 4,62,020 ಪುರುಷ ಮತದಾರರು ಹಾಗೂ 4,64,015 ಮಹಿಳೆಯರು ಸೇರಿ ಒಟ್ಟು 9,26,035 ಮತದಾರರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿದ್ದಾರೆಂದು ಅವರು ಮಾಹಿತಿ ನೀಡಿದರು.

ಜ.16ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಶೃಂಗೇರಿ ಕ್ಷೇತ್ರದಲ್ಲಿ 164400, ಮೂಡಿಗೆರೆ ಕ್ಷೇತ್ರದಲ್ಲಿ 167150, ಚಿಕ್ಕಮಗಳೂರು ಕ್ಷೇತ್ರದಲ್ಲಿ 2,12,992, ತರೀಕೆರೆ ಕ್ಷೇತ್ರದಲ್ಲಿ 1,81,671 ಹಾಗೂ ಕಡೂರು ಕ್ಷೇತ್ರದಲ್ಲಿ 1,99,822 ಮತದಾರರಿದ್ದಾರೆಂದು ಮಾಹಿತಿ ನೀಡಿದ ಅವರು, ಅಂತಿಮ ಪಟ್ಟಿಯಲ್ಲಿ 18-19 ವಯಸ್ಸಿನ ಮತದಾರರ ಸಂಖ್ಯೆ 10,833 ಹಾಗೂ 19 ವರ್ಷ ಮೇಲ್ಪಟ್ಟಿರುವ ಮತದಾರರ ಸಂಖ್ಯೆ 9,15,202 ಇದೆ ಎಂದರು.

ನಗರಸಭೆ ವಾರ್ಡ್‍ಗಳ ಮತದಾರರ ಪಟ್ಟಿ ಸಂಬಂಧ ರಾಜಕೀಯ ಪಕ್ಷಗಳ ಮುಖಂಡರು, ಕೆಲವು ವಾರ್ಡ್ ಗಳ ಮತದಾರರ ಪಟ್ಟಿಯಲ್ಲಿದ್ದ ಮತದಾರರನ್ನು ಬೇರೆ ವಾರ್ಡ್‍ಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ದೂರಿದ್ದರು. ಈ ದೂರುಗಳ ಮೇರೆಗೆ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಅಂತಹ ಮತದಾರರ ಮಾಹಿತಿ ಪಡೆದು ಪಟ್ಟಿಯನ್ನು ಸರಿಪಡಿಸಲಾಗಿದೆ.
- ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News