ಅನ್ವರ್ ಹತ್ಯೆ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಆರೋಪ: ನೂರ್ ಮುಹಮ್ಮದ್

Update: 2019-01-16 17:15 GMT

ಚಿಕ್ಕಮಗಳೂರು, ಜ.16: ಕಳೆದ 7 ತಿಂಗಳ ಹಿಂದೆ ನಗರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಮುಹಮ್ಮದ್ ಅನ್ವರ್ ಕೊಲೆ ಪ್ರಕರಣದಲ್ಲಿ ಆತನ ಸಹೋದರ ಮುಹಮ್ಮದ್ ಕಬೀರ್ ಎಂಬವರು ನನ್ನ ಹೆಸರನ್ನು ವಿನಾಃ ಕಾರಣ ಸೇರಿಸಿ ನನ್ನ ತೇಜೋವಧೆಯನ್ನು ಮಾಡಲು ಯತ್ನಿಸುತ್ತಿದ್ದಾರೆ. ಇದರಿಂದ ನಾನು ಹಾಗೂ ನನ್ನ ಕುಟುಂಬದವರು ಮಾನಸಿಕವಾಗಿ ನೊಂದಿದ್ದೇವೆ ಎಂದು ಮಾಜಿ ನಗರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ (ಬದ್ರು) ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೂ ತನಗೂ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸ್ ಅಧಿಕಾರಿಗಳು ತನ್ನನ್ನು ಈಗಾಗಲೇ ವಿಚಾರಣೆ ನಡೆಸಿದೆ. ಆ ಸಂದರ್ಭದಲ್ಲಿ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ಮುಂದೆಯೂ ಸಹಕರಿಸುತ್ತೇನೆ ಎಂದ ಅವರು, ಈ ಕೊಲೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದರೂ ಮತ್ತೆ ಮತ್ತೆ ತನ್ನ ಹಾಗೂ ತನ್ನ ಕುಟುಂಬದವರ ಹೆಸರನ್ನು ಸಾರ್ವಜನಿಕವಾಗಿ, ಮಾಧ್ಯಮಗಳ ಮೂಲಕ ಪ್ರಕಟಿಸಲಾಗುತ್ತಿದೆ. ಇದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಹೆಸರನ್ನು ಹಾಳು ಮಾಡಲಾಗುತ್ತಿದೆ. ತನ್ನ ಘಟನೆಯಲ್ಲಿ ತನ್ನ ಪಾತ್ರವಿದ್ದದ್ದು ನಿಜವಾಗಿದ್ದಲ್ಲಿ ಪೊಲೀಸರು ತನ್ನನ್ನು ಸುಮ್ಮನೆ ಬಿಡುತ್ತಿದ್ದರೇ ಎಂದು ಅವರು ಪ್ರಶ್ನಿಸಿದರು.

ಪ್ರಕರಣದಲ್ಲಿ ತನ್ನನ್ನು ವಿನಾಕರಣ ಎಳೆದು ತರಲಾಗುತ್ತಿದೆ ಎಂದು ಆರೋಪಿಸಿದ ಅವರು, ದುರುದ್ದೇಶದಿಂದ ನನ್ನ ಹೆಸರನ್ನು ಬಳಸಿಕೊಂಡು ಪೋಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯ ದಾರಿ ತಪ್ಪಿಸುವ ನಿರಂತರ ಪ್ರಯತ್ನವನ್ನು ಅನ್ವರ್ ಸಹೋದರ ಕಬೀರ್ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಸಮರ್ಪಕ ತನಿಖೆ ನಡೆಸಿ ಘಟನೆಯ ಸತ್ಯಾಸತ್ಯತೆಯನ್ನು ಹೊರತಂದು ನಿಜವಾದ ಅಪರಾಧಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಪ್ರಕರಣ ಸಂಬಂಧ ಪೊಲೀಸರಿಗೆ ಎಲ್ಲ ರೀತಿಯ ಸಹಕಾರಕ್ಕೆ ತಾನು, ತನ್ನವರು ಸಿದ್ಧರಿದ್ದೇವೆ. ಕಬೀರ್ ಅವರು ತನ್ನ ಸಹೋದರನ ಸಾವಿಗೆ ನ್ಯಾಯ ಕೇಳಲಿ, ಆದರೆ ಸುಖಾಸುಮ್ಮನೆ ಸಂಬಂಧವಿಲ್ಲದವರ ಹೆಸರನ್ನು ಎಳೆದು ತಂದು ಮಾನಸಿಕವಾಗಿ ಹಿಂಸೆ ನೀಡುವುದನ್ನು ನಿಲ್ಲಿಸಬೇಕೆಂದು ನೂರ್ ಮುಹಮ್ಮದ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಮುಖಂಡರಾದ ಪ್ರಕಾಶ್, ಸಂಗೀನ್‍ ಮಸೀದಿಯ ಅಧ್ಯಕ್ಷ ಅಬ್ಬಾಸ್, ಜುಮಾ ಮಸೀದಿಯ ಅಧ್ಯಕ್ಷ ಬದ್ರುದೀನ್, ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News