ರಾಜಕಾರಣದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಯಿಂದ ಗೌರವಿಸಬೇಕಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-01-16 17:22 GMT

ಕಡೂರು. ಜ.16: ಮನುಷ್ಯ ಸಮಾಜಮುಖಿಯಾಗಬೇಕು. ದ್ವೇಷ ಇಲ್ಲದೇ ಮನುಷ್ಯನಾಗಿ ಬದುಕಬೇಕಿದೆ. ರಾಜಕಾರಣದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಯಿಂದ ಗೌರವಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಪಟ್ಟಣದ ಮೊದಲಿಯಾರ್ ಕಾಲೋನಿಯ ದಿ. ಕೆ.ಎಂ.ಕೃಷ್ಣಮೂರ್ತಿ ಅವರ ನಿವಾಸದ ಸಮೀಪದ ಏರ್ಪಡಿಸಲಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಅವರ ಮಾತೃಶ್ರೀಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಬೇರೆ ಧರ್ಮದವರನ್ನು ವಿರೋಧಿಸಬೇಕು ಅಂದವರಿಗೆ ಜನ ಮನ್ನಣೆ ನೀಡಬಾರದು. ಬೇರೆಯವರನ್ನು ಸತ್ಕರಿಸುವ, ಪ್ರೀತಿಸುವ ಗುಣ ಇದ್ದರೆ ಬದುಕು ಸಾರ್ಥಕವಾಗಲಿದೆ ಎಂದರು.

ಯಾವುದೇ ಗಂಡಸಿನ ಯಶಸ್ಸಿನಲ್ಲಿ ಹೆಣ್ಣಿನ ಪಾತ್ರ ಹೆಚ್ಚು ಇರುತ್ತದೆ. ಮನುಷ್ಯ ಎಷ್ಟು ಕಾಲ ಬದುಕುವುದು ಮುಖ್ಯವಲ್ಲ. ಬದುಕಿನಲ್ಲಿ ಆರೋಗ್ಯದಿಂದರಬೇಕು. ಮನೆಯ ಹಿರಿಯರಿಗೆ ಖಾಯಿಲೆ ಬಂದರೆ ಇಡೀ ಕುಟುಂಬ ಖಾಯಿಲೆಗೆ ತುತ್ತಾಗುತ್ತಾರೆ. ಸ್ವತಂತ್ರ ಹೋರಾಟಗಾರರು ಸ್ವಾರ್ಥಕ್ಕಾಗಿ ಹೋರಾಟ ಮಾಡಲಿಲ್ಲ. ಅವರ್ಯಾರು ಶಾಸಕರಾಗಲು, ಮಂತ್ರಿಗಳಾಗಲು ಹೋರಾಟ ಮಾಡಲಿಲ್ಲ. ಜೀವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಶಾಸಕರಾಗಲಿ, ಮಂತ್ರಿಗಳಾಗಲಿ ಆಗಲಿಲ್ಲ ಎಂದರು.

ಬ್ರಿಟಿಷರ ಗುಲಾಮಗಿರಿಯಿಂದ ಹೊರ ಬಂದು ಜನತೆ ಸ್ವಾತಂತ್ರ್ಯದಿಂದ ಬದುಕುಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ತ್ಯಾಗಮನೋಭಾವ, ದೇಶಾಭಿಮಾನ ಇತ್ತು. ದಿ.ಜಯಮ್ಮನವರ ಪತಿ ಸ್ವಾತಂತ್ರ್ಯ ಹೋರಾಟಗಾರರಾಗಿ 11 ತಿಂಗಳು ಜೈಲುವಾಸ ಅನುಭವಿಸಿದ್ದರು. ಅವರ ಸಂಸ್ಕಾರವನ್ನು ಬೆಳೆಸಿದ ಮಗ ದಿ. ಕೆ.ಎಂ. ಕೃಷ್ಣಮೂರ್ತಿ ಅವರು ನಾಲ್ಕು ಬಾರಿ ಶಾಸಕರಾಗಲು ತಾಯಿಯ ಪಾತ್ರ ಹೆಚ್ಚಿನದು ಎಂದರು.

ದಿ.ಕೆ.ಎಂ. ಕೃಷ್ಣಮೂರ್ತಿ ಅವರು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಗೆ ಕಾರಣವಾಗಿದ್ದು, ಅವರ ತಾಯಿ ಜಯಮ್ಮನವರು ಸೆರೆಮನೆಯಲ್ಲಿ ತಮ್ಮ ಶಕ್ತಿ ನೀಡುತ್ತಿದ್ದರು. ಕಡೂರಿಗೂ ನಮಗೂ ಆತ್ಮೀಯ ಸಂಬಂಧವಿದೆ. ನನಗೂ ನಿಮ್ಮ ಬಗ್ಗೆ ವಿಶೇಷ ಗೌರವವಿದೆ. ಮನುಷ್ಯರಲ್ಲಿ ಸಾವು ಖಚಿತ ಹುಟ್ಟು ಆಕಸ್ಮಿಕ. ಇದರ ಮಧ್ಯೆ ಬದುಕು ಸಮಾಜಮುಖಿಯಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೆಂಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ತರೀಕೆರೆ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್. ವಿಜಯ್‍ಕುಮಾರ್, ಮಾಜಿ ಶಾಸಕಿ ಗಾಯತ್ರಿಶಾಂತೇಗೌಡ, ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್, ಎ.ಎನ್.ಮಹೇಶ್, ಜಿ.ಪಂ.ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಜಿ.ಪಂ.ಸದಸ್ಯರಾದ ಶರತ್‍ ಕೃಷ್ಣಮೂರ್ತಿ, ಲೋಲಾಕ್ಷಿಬಾಯಿ, ತಾ.ಪಂ. ಅಧ್ಯಕ್ಷೆ ಭಾರತಿ ಪ್ರಹ್ಲಾದ್, ಉಪಾಧ್ಯಕ್ಷ ಚಂದ್ರಪ್ಪ, ಸದಸ್ಯರಾದ ರೇಣುಕಾಉಮೇಶ್, ಪುರಸಭಾ ಅಧ್ಯಕ್ಷ ಎಂ.ಮಾದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸೋಮಶೇಖರ್, ಸದಸ್ಯರಾದ ಎನ್.ಬಷೀರ್ ಸಾಬ್, ಕೆ.ಎಂ.ಮೋಹನ್‍ ಕುಮಾರ್ (ತೋಟದಮನೆ ಮುದ್ದು), ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಟಿ.ಕಲ್ಲೇಶ್, ಎಂ.ಎಚ್.ಚಂದ್ರಪ್ಪ, ಕೆ.ಎಂ.ವಿನಾಯಕ್, ಡಿ.ಉಮೇಶ್, ರಾಜ್‍ ಕುಮಾರ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News