ಮಂಡ್ಯ: ಹಕ್ಕಿಪಿಕ್ಕಿ, ಅಲೆಮಾರಿ ಸಮುದಾಯಕ್ಕೆ ಭೂಮಿ, ವಸತಿ ನೀಡಲು ಆಗ್ರಹಿಸಿ ಧರಣಿ

Update: 2019-01-16 17:46 GMT

ಮಂಡ್ಯ,ಜ.16: ಜಿಲ್ಲೆಯಲ್ಲಿ ಹಲವು ದಶಕಗಳಿಂದ ವಾಸವಿರುವ ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಸಮುದಾಯಕ್ಕೆ ಭೂಮಿ, ವಸತಿ ನೀಡಲು ಆಗ್ರಹಿಸಿ ಕರ್ನಾಟಕ ಜನಶಕ್ತಿ ಮತ್ತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಹೊರಟ ಹಕ್ಕಿಪಿಕ್ಕಿ ಸಮುದಾಯದ ನೂರಾರು ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ನಾಗಮಂಗಲ ತಾಲೂಕಿನ ಶಿಕಾರಿಪುರದಲ್ಲಿ ವಾಸವಿರುವ 200 ಕುಟುಂಬಗಳಲ್ಲಿ ಕೇವಲ 25 ಕುಟುಂಬ ಮಾತ್ರ ಭೂಮಿ ಹೊಂದಿದ್ದಾರೆ. ಇಲ್ಲಿ 57 ಎಕರೆ ಗೋಮಾಳದ ಭೂಮಿ ಇದ್ದು, ಅದನ್ನು ಹಕ್ಕಿಪಿಕ್ಕಿ ಸಮುದಾಯದವರಿಗೆ ಹಂಚಬೇಕು. ಹಕ್ಕಿಪಿಕ್ಕಿ ಸಮುದಾಯದ ಮುಖಂಡರ ಮೇಲೆ ದಾಖಲಿಸುವ ಮೊಕದ್ದಮೆ ಹಿಂಪಡೆಯಬೇಕು. ಶ್ರೀರಂಗಪಟ್ಟಣದ ಮೊಗರಳ್ಳಿ ಮಂಟಿಯಿಂದ ಎತ್ತಂಗಡಿ ಮಾಡಿ ಮಹದೇವಪುರದ ಚೆನ್ನಹಳ್ಳಿಗೆ ಸಾಗಿಸಿರುವ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಕ್ಕೆ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಮಾತಿಗೆ ತಪ್ಪಿದ್ದು, ಕೂಡಲೇ ಅವರಿಗೆ 2 ಎಕರೆಯಂತೆ ಸಾಗುವಳಿ ಭೂಮಿ ಮತ್ತು ವಸತಿ ವ್ಯವಸ್ಥೆ ಹಕ್ಕು ನೀಡಬೇಕು.

ಪಾಂಡವಪುರ ತಾಲೂಕು ಅನುವಾಳು ಗ್ರಾಮದಲ್ಲಿ ಹಕ್ಕಿಪಿಕ್ಕಿ ಸಮುದಾಯ 70 ಕುಟುಂಬಗಳಿಗೆ ವಸತಿ ಮತ್ತು ಹಕ್ಕುಪತ್ರ ನೀಡಬೇಕು. ಸರ್ವೆನಂ.75ರಲ್ಲಿ 250 ಎಕರೆ ಸರ್ಕಾರಿ ಗೋಮಾಳ ಜಾಗವಿದ್ದು ಕಾನೂನುಬದ್ಧವಾಗಿ ಹಂಚಬೇಕು ಹಾಗೂ ಅಲೆಮಾರಿ, ಆದಿವಾಸಿ, ಹಕ್ಕಿಪಿಕ್ಕಿ ಸಮುದಾಯಗಳಿಗೆ ಸರ್ಕಾರ ವಿಶೇಷ ಯೋಜನೆಯಡಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ಸಂಚಾಲಕ ಸಿದ್ದರಾಜು ಮಾತನಾಡಿ, ಕಳೆದ ಹಲವು ದಶಕಗಳಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಕ್ಕಿಪಿಕ್ಕಿ, ಇತರೆ ಅಲೆಮಾರಿ ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಶ್ರಮಜೀವಿಗಳಾದ ಇವರಿಗೆ ಇದುವರೆಗೂ ಮೂಲಭೂತ ಸೌಲಭ್ಯಗಳಾಗಲೀ ಸಂವಿಧಾನ ಹಕ್ಕುಗಳಾಗಲಿ ದೊರಕದ ಕಾರಣ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಈ ಸಮುದಾಯದ ಜನರು ಒಂದೆಡೆ ನೆಲೆ ನಿಂತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬದುಕನ್ನು ಉತ್ತಮಪಡಿಸುವ ಅವಕಾಶಕ್ಕಾಗಿ ಹೋರಾಡುತ್ತಿದ್ದರು. ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಆದಿವಾಸಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳನ್ನು ಸರ್ಕಾರ ಈ ಕೂಡಲೇ ಕೊಡಬೇಕು. ನಾಗಮಂಗಲ ತಾಲೂಕು ಶಿಕಾರಿಪುರದಲ್ಲಿ ವಾಸವಾಗಿರುವ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುತ್ತಮುತ್ತಲ ಗ್ರಾಮಸ್ಥರು ಮತ್ತು ಅಧಿಕಾರಿಗಳು ಮನುಷ್ಯರಂತೆ ಕಾಣದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಹೊರಿಸಿ ಹಕ್ಕಿಪಿಕ್ಕಿ ಸಮುದಾಯದವರ ಮೇಲೆ ದೂರುಗಳನ್ನು ದಾಖಲಿಸಲಾಗಿದೆ. ಅರಣ್ಯ ಇಲಾಖೆ ಮತ್ತು ಇತರ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮುನ್ನಡೆ ಸಂಘಟನೆಯ ಪೂರ್ಣಿಮಾ ಮಾತನಾಡಿ, ಹಕ್ಕಿಪಿಕ್ಕಿ ಸಮುದಾಯಕ್ಕೆ ಇದುವರೆಗೂ ಯಾವುದೇ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರನ್ನು ಮನುಷ್ಯರೆಂದು ಪರಿಗಣಿಸದೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದ್ದಾರೆ. ಇನ್ನಾದರೂ ಇವರಿಗೆ ಎಲ್ಲ ನಾಗರಿಕ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮನವಿ ಮಾಡಿದರು.

ಶ್ರಮಿಕ ನಿವಾಸಿಗಳ ಒಕ್ಕೂಟದ ಎಸ್.ಪ್ರಕಾಶ್, ಚಂದ್ರಶೇಖರ್, ಗೋಬಿ ಪ್ರಕಾಶ್, ಮಹಿಳಾ ಮುನ್ನಡೆಯ ಈಶ್ವರಿ, ಗೌರಮ್ಮ, ಮಂಜುಳಮ್ಮ, ಹಕ್ಕಿಪಿಕ್ಕಿ ಸಮುದಾಯದ ಕುಷಾ, ರಾಮಸ್, ಕೇಸರಿ, ರಮೇಶ, ಬಿನೇಶ್, ಬಾಲಕೃಷ್ಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News