×
Ad

ಹನೂರು ವಿಷಪ್ರಸಾದ ದುರಂತ: ವಿಚಾರಣೆ ಜ.29ಕ್ಕೆ ಮುಂದೂಡಿಕೆ

Update: 2019-01-16 23:27 IST

ಚಾಮರಾಜನಗರ,ಜ.16: ಸೂಳ್ವಾಡಿ ಕಿಚ್ಚಗುತ್ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿ 17 ಮಂದಿಯ ಸಾವಿಗೆ ಕಾರಣರಾದ ಬಂಧಿತ ಆರೋಪಿಗಳ ವಿಚಾರಣೆಯನ್ನು ಜನವರಿ 29 ಕ್ಕೆ ಮುಂದೂಡಲಾಯಿತು.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸೂಳ್ವಾಡಿ ಗ್ರಾಮದ ಹೊರ ವಲಯದಲ್ಲಿರುವ ಕಿಚ್ಚಗುತ್ ಮಾರಮ್ಮ ದೇವಾಲಯದಲ್ಲಿ ಡಿಸೆಂಬರ್ 14 ರಂದು ವಿಷ ಮಿಶ್ರಿತ ಪ್ರಸಾದ ತಯಾರಿಸಿ ಅಮಾಯಕ ಭಕ್ತರಿಗೆ ವಿತರಣೆ ಮಾಡಿ 17 ಮಂದಿ ಸಾವನ್ನಪ್ಪಿದ್ದು, 107 ಮಂದಿ ಅಸ್ವಸ್ಥರಾಗಲು ಕಾರಣರಾದ ದೇವಾಲಯದ ಟ್ರಸ್ಟ್ ಅಧ್ಯಕ್ಷ ಸ್ವಾಮಿಜಿ ಇಮ್ಮಡಿ ಮಹದೇವಸ್ವಾಮಿ, ಈತನ ಪತ್ನಿ ಅಂಬಿಕಾ ಮತ್ತು ನಾಗದೇವಾಲಯದ ಅರ್ಚಕ ದೊಡ್ಡಯ್ಯ, ಟ್ರಸ್ಟ್ ಮ್ಯಾನೇಜರ್ ಮಾದೇಶ್ ಅವರನ್ನು ಮೈಸೂರಿನ ಕಾರಾಗೃಹದಿಂದಲೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾದೀಶರು 11.50 ಕ್ಕೆ ವಿಚಾರಣೆ ನಡೆಸಿದರು.

ಬಂಧಿತ ಆರೋಪಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ಸಂತ್ರಸ್ಥರಿಗೆ ಪರಿಹಾರ‌ ನೀಡಲಾಗಿದೆಯಾ ಎಂದು ಈ ವೇಳೆ ನ್ಯಾಯಾಧೀಶರು ಪರಿಶೀಲಿಸಿದರು. ಈ ವೇಳೆ ನಾಲ್ವರು ಆರೋಪಿಗಳ ಪರ ಯಾರದರೂ ವಕಾಲತ್ತು ವಹಿಸುತ್ತಾರಾ ಎಂದು ಪ್ರಶ್ನಿಸಿದರು. ಇದಕ್ಕೆ ನಾಲ್ವರು ಆರೋಪಿಗಳೂ ಹತ್ತು ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಇದೇ ತಿಂಗಳು 29ಕ್ಕೆ ವಿಚಾರಣೆಯನ್ನು ಮುಂದೂಡಿದರು. 

ಇಂದು ಕೂಡ ಬಂಧಿತ ಆರೋಪಿಗಳ ಪರವಾಗಿ ವಕೀಲರು ವಕಾಲತು ವಹಿಸಲಿಲ್ಲ. ಅಲ್ಲದೆ ಚಾಮರಾಜನಗರ, ಮೈಸೂರು ಜಿಲ್ಲೆಯ ವಕೀಲರ ಸಂಘದವರು ಸೂಳ್ವಾಡಿ ದುರಂತದ ಆರೋಪಿಗಳಿಗೆ ವಕಾಲತ್ತು ವಹಿಸುವುದಿಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News