×
Ad

ಶಿವಮೊಗ್ಗದ ಯಡಿಯೂರಪ್ಪ ನಿವಾಸಕ್ಕೆ ಬಿಗಿ ಪೊಲೀಸ್ ಪಹರೆ

Update: 2019-01-16 23:36 IST

ಶಿವಮೊಗ್ಗ, ಜ. 16: 'ಆಪರೇಷನ್ ಕಮಲ'ದ ಮೂಲಕ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಯತ್ನಿಸುತ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಶಿವಮೊಗ್ಗ ನಗರದಲ್ಲಿರುವ ನಿವಾಸಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ದಿನದ 24 ಗಂಟೆಗಳ ಕಾಲ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. 

ವಿನೋಬನಗರ ಬಡಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪರ ನಿವಾಸವಿದೆ. ಭಾನುವಾರದಿಂದಲೇ ನಿವಾಸಕ್ಕೆ ಹಗಲು-ರಾತ್ರಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ವಿನೋಬನಗರ ಠಾಣೆಯ ಪೊಲೀಸರು ಭದ್ರತೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಈ ಹಿಂದೆ ಆಪರೇಷನ್ ಕಮಲಕ್ಕೆ ಯತ್ನಿಸಿದ ಸಂದರ್ಭದಲ್ಲಿ ಹಾಗೂ ಇತರೆ ಪ್ರಕರಣಗಳಲ್ಲಿ, ಬಿ.ಎಸ್.ವೈ.ರವರ ವಿನೋಬನಗರ ನಿವಾಸದ ಎದುರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಿಢೀರ್ ಆಗಿ ಪ್ರತಿಭಟನೆ - ಧರಣಿ ನಡೆಸಲು ಮುಂದಾಗಿದ್ದ ಘಟನೆಗಳು ನಡೆದಿದ್ದವು. 

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗುವ ಸಾಧ್ಯತೆಗಳಿವೆ. ಈ ಕಾರಣದಿಂದ ಬಿ.ಎಸ್.ವೈ. ನಿವಾಸಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News