×
Ad

ಶಾಲೆಗಳ ಪಕ್ಕದಲ್ಲಿ ಕೊಳೆತ ತ್ಯಾಜ್ಯಕ್ಕೆ ಬೆಂಕಿ: ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ

Update: 2019-01-16 23:58 IST

ಸಿದ್ದಾಪುರ (ಕೊಡಗು), ಜ.16: ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸದೆ ಶಾಲೆಗಳ ಸಮೀಪ, ಮುಖ್ಯ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಸುತ್ತ ಮುತ್ತಲಿನಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳಿಗೆ ದಿನ ನಿತ್ಯ ಬೆಂಕಿ ಹಚ್ಚುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ವಾಯು ಮಾಲಿನ್ಯದಿಂದ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ.

ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳಷ್ಟು ಪೈಸಾರಿ ಜಾಗಗಳಿದ್ದರೂ ಕಳೆದ ಹಲವಾರು ವರ್ಷಗಳಿಂದಲೂ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಮುಂದಾಗದ ಪರಿಣಾಮ ಕೊಳೆತ ತ್ಯಾಜ್ಯಗಳಿಗೆ ಗ್ರಾಮ ಪಂಚಾಯತ್ ಪೌರ ಕಾರ್ಮಿಕರು ಪ್ರತಿ ದಿನ ಬೆಳಿಗ್ಗೆ ಬೆಂಕಿ ಹಚ್ಚುತ್ತಿರುವುದರಿಂದ ಪಕ್ಷಿ ಸಂಕುಲದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ.

ಶಾಲಾ ಮುಂಭಾಗದಲ್ಲಿ ತ್ಯಾಜ್ಯಕ್ಕೆ ಪ್ರತಿದಿನ ಬೆಂಕಿ: ವಿರಾಜಪೇಟೆ ರಸ್ತೆಯಲ್ಲಿರುವ ಸರಕಾರಿ ಮಲಯಾಳಂ ಶಾಲೆ ಹಾಗೂ ಸಂತ ಅನ್ನಮ್ಮನವರ ಶಾಲೆಯ ಮುಂಭಾಗದಲ್ಲಿ ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವರ್ಷಗಳ ಹಿಂದೆ ಬಸ್ ಆಶ್ರಯ ತಾಣವನ್ನು ನಿರ್ಮಿಸಲಾಗಿತ್ತು. ಇದರ ಪಕ್ಕದಲ್ಲಿಯೇ ಕೊಳೆತ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ಬಸ್ ಆಶ್ರಯ ತಾಣ ಉಪಯೋಗ ಶೂನ್ಯವಾಗಿದೆ. ಮಡಿಕೇರಿ ರಸ್ತೆಯಲ್ಲಿರುವ ಖಾಸಗಿ ಶಾಲೆಯ ಸಮೀಪ ಸೇರಿದಂತೆ ವಿವಿಧ ಶಾಲೆಗಳ ಪಕ್ಕದಲ್ಲಿ ಬೆಳಗ್ಗಿನ ಜಾವ ವಿದ್ಯಾರ್ಥಿಗಳು ಶಾಲೆಗೆ ಬರುವ ಸಮಯದಲ್ಲೇ ಕೊಳೆತ ತ್ಯಾಜ್ಯಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಸುರಿದಿರುವುದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. 

ರಸ್ತೆ ಬದಿಯಲ್ಲೆಲ್ಲಾ ಕೋಳಿ ತ್ಯಾಜ್ಯ: ಮೈಸೂರು ರಸ್ತೆ, ಪಾಲಿಬೆಟ್ಟ ರಸ್ತೆ, ವಿರಾಜಪೇಟೆ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆ ಬದಿಯಲ್ಲೆಲ್ಲಾ ಕೋಳಿ ಮಾಂಸದ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಬಿಸಾಕಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರು ಹಾಗೂ ಪ್ರವಾಸಿಗರು ದುರ್ನಾತದೊಂದಿಗೆ ಪಟ್ಟಣ ಪ್ರವೇಶಿಸುವಂತಾಗಿದೆ. ವರ್ಷಕ್ಕೆ 1.40 ಲಕ್ಷ ರೂ ಪಡೆದು ಕೋಳಿ ಮಾಂಸದ ಅಂಗಡಿ ಮಳೆಗೆಗಳನ್ನು ನೀಡಿರುವ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಪರಿಣಾಮ ಕೋಳಿ ವ್ಯಾಪಾರಸ್ಥರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ಗ್ರಾಮ ಪಂಚಾಯತ್ ಕಸ ಸಂಗ್ರಹಿಸುವ ವಾಹನ ಎರಡು ದಿನಕೊಮ್ಮೆ ಮಳಿಗೆಗಳಿಂದ ಕೋಳಿ ತ್ಯಾಜ್ಯವನ್ನು ಸಂಗ್ರಹಿಸಲು ಮುಂದಾಗಿದೆ. ಆದರೂ ಪಟ್ಟಣದ ಎಲ್ಲಾ ರಸ್ತೆ ಬದಿಯಲ್ಲೂ ಪ್ರತಿ ದಿನ ರಾತ್ರಿ ಕೋಳಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪಕ್ಕದ ನೆಲ್ಯಹುದಿಕೇರಿ ಗ್ರಾಮದಲ್ಲೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಅಲ್ಲಿಯ ಕೋಳಿ ವ್ಯಾಪಾರಸ್ಥರು ಸಿದ್ದಾಪುರ ಪಟ್ಟಣದ ಮುಖ್ಯ ರಸ್ತೆಯಲ್ಲಿ ರಾತ್ರೋರಾತ್ರಿ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಸುರಿಯುತ್ತಿದ್ದಾರೆ ಎಂದು ಸಿದ್ದಾಪುರದ ಕೋಳಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ತಾರ್ಕಿಕ ಅಂತ್ಯ ಕಾಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಗ್ರಾಮ ಪಂಚಾಯತ್ ನ ಆಡಳಿತ ವೈಫಲ್ಯತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದಕ್ಕಿಂತ ಮುಂಚಿತವಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

ಪಟ್ಟಣದಲ್ಲಿ ಶೇಖರಣೆಯಾಗುತ್ತಿರುವ ಕಸದಲ್ಲಿ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಟ್ರ್ಯಾಕ್ಟರ್ ನಲ್ಲಿ ತುಂಬಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಾಲಾ ಸಮೀಪದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬಸ್ ಆಶ್ರಯ ತಾಣದ ಸಮೀಪ ಕಸ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತ್ಯಾಜ್ಯಕ್ಕೆ ಬೆಂಕಿ ಹಚ್ಚಲು ಗ್ರಾಮ ಪಂಚಾಯತ್ ಸೂಚಿಸಿಲ್ಲ. ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ಜನತೆಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಗ್ರಾಮ ಪಂಚಾಯತಿ ಸದಾ ಸಿದ್ದವಾಗಿದೆ.

-ವಿಶ್ವನಾಥ್, ಅಭಿವೃದ್ಧಿ ಅಧಿಕಾರಿ ಸಿದ್ದಾಪುರ ಗ್ರಾಮ ಪಂಚಾಯತ್

Writer - ಮುಸ್ತಫ ಸಿದ್ದಾಪುರ

contributor

Editor - ಮುಸ್ತಫ ಸಿದ್ದಾಪುರ

contributor

Similar News