×
Ad

ಕೊಡಗು ಸಂತ್ರಸ್ತರಿಗೆ ಮಾನಸಿಕ ಸ್ಥೈರ್ಯ ತುಂಬಿದ ಜಮಿಯತ್ ಉಲಮಾದ ಆರ್ಥಿಕ ನೆರವು

Update: 2019-01-17 18:59 IST

ಮಡಿಕೇರಿ, ಜ.17: ಇಡೀ ವಿಶ್ವದಲ್ಲಿ ಭಾವೈಕ್ಯತೆಯನ್ನು ಸಾರುವ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ ಎನ್ನುವುದನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆ ಸಾಬೀತು ಪಡಿಸಿತ್ತು. ಅತಿವೃಷ್ಟಿಯ ಅತಿರೇಕಕ್ಕೆ ಎಲ್ಲಾ ಜಾತಿ, ಜನಾಂಗದ ಜನರೂ ಸಂಕಷ್ಟಕ್ಕೆ ಸಿಲುಕಿದರು, ಮನೆ, ಕೃಷಿ ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾದರು. ಭೇದ, ಭಾವವಿಲ್ಲದೆ ಜೀವವನ್ನೂ ಬಿಟ್ಟರು.

ಈ ದುರಂತ ಸಂಭವಿಸಿ ಐದು ತಿಂಗಳುಗಳಾದರೂ ಸಂತ್ರಸ್ತ ಕುಟುಂಬಗಳು ಅತಂತ್ರ ಪರಿಸ್ಥಿತಿಯಲ್ಲೇ ದಿನ ದೂಡುತ್ತಿವೆ. ಅನ್ನವೇನೋ ಸಿಗುತ್ತಿದೆ, ಆದರೆ ಆಶ್ರಯ ಇಲ್ಲ ಎನ್ನುವ ಕೊರಗು ಸಂತ್ರಸ್ತರನ್ನು ಅತಿಯಾಗಿ ಕಾಡುತ್ತಿದೆ. ಆದರೆ ನೊಂದವರಿಗೆ ಸಾಂತ್ವನ ಹೇಳಿ, ಸಂಕಷ್ಟದ ಬದುಕಿಗೆ ಒಂದಷ್ಟು ಸಮಾಧಾನ ಹೇಳುವ ಪ್ರಯತ್ನವನ್ನು ಜಮಿಯತ್ ಉಲಮಾ-ಎ-ಕರ್ನಾಟಕದ ಬೆಂಗಳೂರು ಮತ್ತು ಮಡಿಕೇರಿ ಘಟಕ ಮಾಡಿತು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸುವ ಕಾರ್ಯಕ್ರಮ ನಡೆಯಿತು.

ಸುಮಾರು 102 ವರ್ಷಗಳ ಇತಿಹಾಸ ಹೊಂದಿರುವ ಜಮಿಯತ್ ಉಲಮಾ ಸಂಸ್ಥೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಇದೇ ಕಾರಣದಿಂದ, ಕೊಡಗಿನಲ್ಲಿ ಮಹಾಮಳೆಯಿಂದ ದುರಂತ ಸಂಭವಿಸಿದೆ ಎನ್ನುವ ಮಾಹಿತಿ ದೊರೆತ ತಕ್ಷಣ ಈ ಸಂಸ್ಥೆ ತುರ್ತಾಗಿ ಸಂತ್ರಸ್ತರಿಗಾಗಿ ದಿನಸಿ ಸಾಮಾಗ್ರಿ ಮತ್ತು ಬಟ್ಟೆಯನ್ನು ಕಳುಹಿಸಿ ದೊಡ್ಡತನ ಮೆರೆದಿತ್ತು. ಇದೀಗ ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಜಮಿಯತ್ ಉಲಮಾ ಸಂಸ್ಥೆ ಜಾತಿ, ಮತ, ಭೇದವಿಲ್ಲದೆ ಸುಮಾರು 45 ಲಕ್ಷ ರೂ.ಗಳಷ್ಟು ಧನ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ. ಮಳೆಹಾನಿಗೊಳಗಾದ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ, ಜೋಡುಪಾಲ, ಮದೆನಾಡು, ಕಾಟಕೇರಿ, ಕಾಲೂರು, ಮಕ್ಕಂದೂರು, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾನಗರ, ಮಲ್ಲಿಕಾರ್ಜುನ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು ಎರಡು ತಿಂಗಳ ಕಾಲ ಸಂತ್ರಸ್ತರ ಸರ್ವೆ ನಡೆಸಿದ ಸಂಸ್ಥೆಯ ಮಡಿಕೇರಿ ಘಟಕ ರಾಜ್ಯ ಸಮಿತಿಗೆ ನೆರವಾಯಿತು.

ಮಡಿಕೇರಿ ಘಟಕದ ಪ್ರಮುಖರಾದ ಎಂ.ಎ.ಅಕ್ಬರ್ ಪಾಷ, ಎಂ.ಕೆ.ಮನ್ಸೂರ್, ಹಫೀಝ್ ರಿಯಾಝ್ ಅಹ್ಮದ್, ಮೌಲಾನ ಅಬ್ದುಲ್ ಹಕೀಂ, ಹಾಫಿಝ್ ಇಸಾಕ್ ಅಹ್ಮದ್ ಸೇರಿದಂತೆ ಸುಮಾರು 12 ಮಂದಿಯ ತಂಡ ಅರ್ಹ ಸಂತ್ರಸ್ತರನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಸುಮಾರು 264 ಕುಟುಂಬಗಳನ್ನು ಪತ್ತೆ ಮಾಡಿದ ಪ್ರಮುಖರು ಸಂಪೂರ್ಣ, ಭಾಗಶಃ ಮತ್ತು ಸ್ವಲ್ಪ ಹಾನಿಯಾದ ಮನೆಗಳೆಂದು ವಿಂಗಡಿಸಿ ಫಲಾನುಭವಿಗಳಿಗೆ ಪರಿಹಾರ ಧನವನ್ನು ವಿತರಿಸಲು ಸಹಕಾರಿಯಾದರು. ಸಂಪೂರ್ಣ ಮನೆ ಹಾನಿಯಾದವರಿಗೆ ತಲಾ ರೂ. 25 ಸಾವಿರ, ಭಾಗಶ: ಹಾನಿಗೆ ರೂ.15 ಸಾವಿರ ಹಾಗೂ ಸ್ವಲ್ಪ ಪ್ರಮಾಣದ ಹಾನಿಗೆ ತಲಾ ರೂ.10 ಸಾವಿರವನ್ನು ವಿತರಿಸಲಾಯಿತು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಿಯತ್ ಉಲಮಾದ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ್ತಿಖಾರ್ ಅಹಮದ್, ಉಪಾಧ್ಯಕ್ಷ ಝೈನುಲ್ ಆಬಿದಿನ್ ರಶಾದಿ ಮುಜಹಿರಿ, ಪ್ರಧಾನ ಕಾರ್ಯದರ್ಶಿ ಹಝ್ರತ್ ಮೌಲಾನ ಮುಪ್ತಿ ಸಂಶುದ್ದೀನ್ ಮತ್ತಿತರ ಪ್ರಮುಖರು ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದರು. ಶಾಂತಿ, ಸೌಹಾರ್ದತೆಯ ಬದುಕಿಗೆ ಕರೆ ನೀಡಿದರು.

"ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮ ದೊಡ್ಡದು, ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೋವಿಗೆ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಹಿಂದು, ಮುಸ್ಲಿಂ, ಕ್ರೈಸ್ತ ಅಥವಾ ಬೇರೆ ಯಾವುದೇ, ಜಾತಿ, ಧರ್ಮಗಳಿಗಿಂತ ಪ್ರಸ್ತುತ ದಿನಗಳಲ್ಲಿ ಮಾನವೀಯ ಧರ್ಮವೇ ಶ್ರೇಷ್ಠವೆನಿಸಿಕೊಂಡಿದೆ" ಎಂದು ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿದ ಜಮಿಯತ್ ಉಲಮಾ-ಎ- ಕರ್ನಾಟಕ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ್ತಿಖಾರ್ ಅಹಮದ್ ಹೇಳಿದರು.

ದೇವರು ಪ್ರತಿಯೊಬ್ಬರಲ್ಲೂ ಮಾನವೀಯತೆ ಎಂಬ ಬೀಜವನ್ನು ಬಿತ್ತಿದ್ದಾನೆ. ಇದನ್ನು ಹೆಮ್ಮರವಾಗಿ ಬೆಳೆಸಿಕೊಂಡು ಸಂಕಷ್ಟದಲ್ಲಿರುವವರಿಗೆ ಬೆಳಕು ನೀಡುವ ಕಾರ್ಯವನ್ನು ಮಾಡಬೇಕಿದೆ. ಪ್ರಾಣಿಗಳಿಗೂ ಮಾನವೀಯತೆಯ ಅಂಶಗಳನ್ನು ನೀಡಲಾಗಿದೆ. ಆದರೆ ಅವುಗಳಿಗೆ ಜವಬ್ದಾರಿಗಳಿಲ್ಲ. ಮಾನವರಿಗೆ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇದ್ದು, ಒಗ್ಗಟ್ಟನ್ನು ಪ್ರತಿಪಾದಿಸುವ ಮಾರ್ಗದಲ್ಲಿ ಸಾಗಬೇಕೆ ಹೊರತು ಕೋಮು ಗಲಭೆಗಳನ್ನು ಸೃಷ್ಟಿಸಬಾರದು ಎಂದು ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಕಿವಿಮಾತು ಹೇಳಿದರು.

ಪರಸ್ಪರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಹೊಂದಾಣಿಕೆಯ ಬದುಕಿನಲ್ಲೇ ಸುಂದರ ಸಮಾಜವನ್ನು ನಿರ್ಮಿಸಬೇಕು. ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾತಿ, ಮತ, ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಆರ್ಥಿಕ ನೆರವನ್ನು ನೀಡುವ ಕಾರ್ಯವನ್ನು ಸಂಘಟನೆ ಮಾಡುತ್ತಿದ್ದು, ಇನ್ನು ಮುಂದೆಯೂ ಕೊಡಗಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಅವರು ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಝ್ರತ್ ಮೌಲಾನ ಮುಪ್ತಿ ಸಂಶುದ್ದೀನ್ ಮಾತನಾಡಿ, ಜಮಿಯತ್ ಉಲಮಾ ಯಾವುದೇ ರಾಜಕೀಯ ಸಂಘಟನೆಯಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸಂಸ್ಥೆಯಾಗಿದೆ. ಸಮಾಜದಲ್ಲಿ ಹಿಂದೂ, ಮುಸ್ಲಿಂ ಎನ್ನುವ ಭೇದ ಭಾವವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಮಾನವೀಯ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮೌಲಾನ ಮುಪ್ತಿ ಸಂಶುದ್ಧಿನ್ ಕರೆ ನೀಡಿದರು.

ಉಪಾಧ್ಯಕ್ಷ ಝೈನುಲ್ ಆಬಿದೀನ್ ರಶಾದಿ ಮುಜಹಿರಿ ಮಾತನಾಡಿ, ಸಂಸ್ಥೆಯು ಸ್ವಾತಂತ್ರ್ಯ ಹೋರಾಟದ ಸಂದರ್ಭ ಭಾರತದಿಂದ ಬ್ರಿಟಿಷರನ್ನು ಓಡಿಸುವಲ್ಲಿ ನೆರವಾಗಿದೆ. ಸ್ವಾತಂತ್ರ್ಯ ನಂತರವೂ ಸಂಸ್ಥೆ ದೇಶದಲ್ಲಿ ಭಾವೈಕ್ಯತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಜಗತ್ತನ್ನು ಒಗ್ಗೂಡಿಸುವ ಪ್ರಯತ್ನಗಳು ಪ್ರತಿಯೊಬ್ಬರಿಂದ ಆಗಬೇಕೆ ಹೊರತು ಒಡೆಯುವ ಕೆಲಸವಾಗಬಾರದೆಂದರು

ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಜಮಿಯತ್ ಸಂಸ್ಥೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲೂ ತನ್ನನ್ನು ತೊಡಗಿಸಿಕೊಂಡಿತ್ತು. ಭವ್ಯ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಅನೇಕ ಉಲಮಾಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದ ಸಂದರ್ಭ ವಿವಿಧ ಸಂಘ, ಸಂಸ್ಥೆಗಳು ಹಾಗೂ ರಾಜ್ಯಗಳು ನೀಡಿದ ನೆರವನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕಾಗಿದೆ ಎಂದರು. ಜಮಿಯತ್ ನ ಕಾರ್ಯ ಕೂಡ ಶ್ಲಾಘನೀಯವಾಗಿದ್ದು, ಸಂತ್ರಸ್ತರು ಎಲ್ಲಾ ನೆರವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ 180 ಸಂತ್ರಸ್ತರಿಗೆ ಚೆಕ್ ರೂಪದಲ್ಲಿ ಪರಿಹಾರ ಧನವನ್ನು ವಿತರಿಸಲಾಯಿತು. ಎಲ್ಲಾ ಜಾತಿ, ಜನಾಂಗದ ಸಂತ್ರಸ್ತರಿಗೂ ಧನ ಸಹಾಯ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಜಮಿಯತ್ ಉಲಮಾ ಸಂಸ್ಥೆಯ ರಾಷ್ಟ್ರೀಯ ಸಮಿತಿ ಸದಸ್ಯ ನಸುರುಲ್ಲಾ ಶರೀಫ್, ಪ್ರಮುಖರಾದ ಎಂ.ಐ.ಅಕ್ಬರ್ ಪಾಷ, ಹಫೀಝ್ ರಿಯಾಝ್ ಅಹ್ಮದ್, ಮೌಲಾನ ಅಬ್ದುಲ್ ಹಕೀಂ, ಎಂ.ಕೆ.ಮನ್ಸೂರ್, ಹಾಫಿಝ್ ಇಸಾಕ್ ಅಹ್ಮದ್ ಮತ್ತಿತರರು ಹಾಜರಿದ್ದು ಚೆಕ್ ವಿತರಿಸಲು ನೆರವಾದರು. ಮಡಿಕೇರಿ ತಾಲೂಕಿನ ವಿವಿಧ ಭಾಗಗಳ 300 ಕ್ಕೂ ಅಧಿಕ ಸಂತ್ರಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿನ ನೆರವು ನೀಡಲಾಗುವುದು 

ಸುಮಾರು 264 ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತದರೂ ಇಂದು 180 ಮಂದಿಗೆ ಮಾತ್ರ ಚೆಕ್ ವಿತರಿಸಲಾಗಿದೆ. ಉಳಿದವರಿಗೆ ಮುಂದಿನ ವಾರ ವಿತರಿಸಲಾಗುವುದೆಂದು ಜಮಿಯತ್ ಉಲಮಾದ ಪ್ರಮುಖ ಹಾಗೂ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ “ವಾರ್ತಾಭಾರತಿ”ಗೆ ತಿಳಿಸಿದರು.

ಅರ್ಹ ಸಂತ್ರಸ್ತ ಫಲಾನುಭವಿಗಳ ಸಂಖ್ಯೆ ಇನ್ನೂ ಹೆಚ್ಚೇ ಇದೆ. ಇವರೆಲ್ಲರಿಗೂ ಆರ್ಥಿಕ ನೆರವು ನೀಡಬೇಕೆನ್ನುವ ಉದ್ದೇಶ ನಮ್ಮದು. ಇದಕ್ಕಾಗಿ ಮತ್ತಷ್ಟು ಹಣದ ಅಗತ್ಯವಿದ್ದು, ಜಮಿಯತ್ ಉಲಮಾ ನೆರವು ನೀಡಲಿದೆ ಎಂದು ಮನ್ಸೂರ್ ವಿಶ್ವಾಸ ವ್ಯಕ್ತಪಡಿಸಿದರು. ಕೇರಳದ ಸಂತ್ರಸ್ತರಿಗೆ ನಾಲ್ಕು ಕೋಟಿ ಮತ್ತು ತಮಿಳುನಾಡಿಗೆ ಒಂದು ಕೋಟಿ ರೂ.ಗಳನ್ನು ನೀಡಿರುವ ಜಮಿಯತ್, ಕೊಡಗು ಜಿಲ್ಲೆಗೂ ಹೆಚ್ಚಿನ ನೆರವನ್ನು ನೀಡಲಿದೆ ಎಂದರು.

ಒಟ್ಟಿನಲ್ಲಿ ಶಾಂತಿ, ಸೌಹಾರ್ದತೆಯ ಸಂದೇಶ ಸಾರುತ್ತಾ ಸಾಮಾಜಿಕ ಕಳಕಳಿಯನ್ನು ತೋರುತ್ತಿರುವ ಜಮಿಯತ್ ಉಲಮಾ ಸಂಸ್ಥೆ ಜಾತಿ, ಮತ, ಭೇದವಿಲ್ಲದೆ ಸಂಕಷ್ಟದಲ್ಲಿರುವ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬುವಲ್ಲಿ ಯಶಸ್ವಿಯಾಗಿದೆ.

Writer - ಲಕ್ಷ್ಮೀಶ್

contributor

Editor - ಲಕ್ಷ್ಮೀಶ್

contributor

Similar News