ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಗೈರು ಹಾಜರಾದರೆ ಕಠಿಣ ಕ್ರಮದ ಎಚ್ಚರಿಕೆ

Update: 2019-01-17 14:04 GMT

ಬೆಂಗಳೂರು, ಜ. 17: ರಾಜ್ಯದಲ್ಲಿನ ಪ್ರಸಕ್ತ ರಾಜಕೀಯಲ್ಲಿ ಸನ್ನಿವೇಶಗಳ ವಿಶೇಷ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆ(ಜ.18) ಮಧ್ಯಾಹ್ನ 3:30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದ್ದು, ಕಾಂಗ್ರೆಸಿನ ಎಲ್ಲ ಶಾಸಕರು ತಪ್ಪದೇ ಹಾಜರಾಗಲು ಸೂಚಿಸಲಾಗಿದೆ.

ಶಾಸಕಾಂಗ ಸಭೆಗೆ ಒಂದು ವೇಳೆ ಹಾಜರಾಗದೇ ಇದ್ದರೆ ಶಾಸಕರ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಕಾಂಗ್ರೆಸ್ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ಬಿಟ್ಟುಬಿಡಲು ಇಚ್ಛಿಸಿರುವಿರೆಂದು ಪರಿಗಣಿಸಿ ಪಕ್ಷಾಂತರ ನಿಷೇಧ ಕಾಯ್ದೆ ಅನುಚ್ಛೇದ 10ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಇದಪ್ಪಾ ವರಸೆ..! ಅಂತಿಮ ತೆರೆಗೆ ದೃಶ್ಯ-ಕೈಮಾಕ್ಸ್, ತಾವೇ ಸೂತ್ರಧಾರಿ ತಾವೇ ಪಾತ್ರಧಾರಿ. ಯಾರಲ್ಲಿ ದೂತರೇ!! ನನ್ನ ಸಭೆಗೆ ಹಾಜಾರಾಗದ ವಂಧಿ ಮಾಗಧರನ್ನು ನನ್ನ ಸಾಮ್ರಾಜ್ಯದಿಂದಲೇ ಉಚ್ಚಾಟಿಸಿ. ಇದು ಕಟ್ಟಾಜ್ಞೆ, ರಾಜಾಜ್ಞೆ. ಸ್ವಗತ: ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯನವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News