ಕೆಪಿಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾದ ಶಾಸಕ ಶಿವರಾಂ ಹೆಬ್ಬಾರ್: ದಿನೇಶ್ ಗುಂಡೂರಾವ್ ಜೊತೆ ಚರ್ಚೆ

Update: 2019-01-17 14:36 GMT

ಬೆಂಗಳೂರು, ಜ.17: ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ ಎಂದು ಬಿಂಬಿಸಲಾಗುತ್ತಿದ್ದ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಂ ಹೆಬ್ಬಾರ್, ಅಪ್ಪನ ಮೇಲೆ ಮಕ್ಕಳು ಸಿಟ್ಟಾಗುವುದು ಸಹಜ ತಾನೇ. ಹಾಗಂತ ಮಕ್ಕಳು ಮನೆ ಬಿಟ್ಟು ಹೋಗುತ್ತಾರಾ? ನಾನು ನನ್ನ ಮೊಮ್ಮಕ್ಕಳ ಜೊತೆ ಅಂಡಮಾನ್‌ಗೆ ಹೋಗಿದ್ದೆ. ಒಂದು ತಿಂಗಳ ಮುಂಚೆಯೆ ಈ ಪ್ರವಾಸ ನಿಗದಿಯಾಗಿತ್ತು. ಇದೇ ಸಮಯದಲ್ಲಿ ಈ ಸಮಸ್ಯೆ ಸೃಷ್ಟಿಯಾದದ್ದು ಕಾಕತಾಳೀಯ ಎಂದರು.

ಪಕ್ಷದ ನಾಯಕರ ಬಳಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ, ಅದು ನಮ್ಮ ಹಕ್ಕು. ಬೇಸರ ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೆ ಚರ್ಚೆ ಮಾಡುತ್ತೇನೆ. ಕೆಲ ವಿಚಾರಗಳ ಬಗ್ಗೆ ನನಗೆ ಬೇಸರವಿದೆ. ಹಾಗಂತ ನಾನು ಪಕ್ಷವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಅವರು ಹೇಳಿದರು.
ರಾಜಕೀಯದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಅದೇ ರೀತಿ ನನಗೂ ಆಸೆ ಇದೆ. ಸಚಿವ ಸ್ಥಾನ ಬೇಕು ಎಂದು ನಾನು ನನ್ನ ಪಕ್ಷದ ಮುಖಂಡರ ಬಳಿ ಕೇಳಿದ್ದೇನೆ. ಇವತ್ತಲ್ಲ ನಾಳೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಶಿವರಾಂ ಹೆಬ್ಬಾರ್ ಹೇಳಿದರು.

ಬಿಜೆಪಿಯವರು ನಮ್ಮ ಕಾರ್ಯಕರ್ತರ ಮೂಲಕ ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ, ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ. ಕಾಂಗ್ರೆಸ್ ನಾಯಕತ್ವ ಕೈಗೊಳ್ಳುವ ನಿರ್ಣಯದ ಪರವಾಗಿಯೇ ನಾವು ಇರುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಶಾಸಕ ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News