ಸರಕಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ಶೋಭಕ್ಕನನ್ನು ಚೆನ್ನಾಗಿ ನೋಡಿಕೊಳ್ಳಲಿ: ಬಿಎಸ್ ವೈಯನ್ನು ಕುಟುಕಿದ ರೇವಣ್ಣ

Update: 2019-01-17 16:31 GMT

ಹಾಸನ,ಜ.17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ ಕೇಂದ್ರದಿಂದ ಅನುದಾನ ತಂದು ರಾಜ್ಯದ ಹಿತ ಕಾಯುವ ಕೆಲಸ ಮಾಡಲಿ. ಅದನ್ನು ಬಿಟ್ಟು ಈ ರೀತಿಯ ರಾಜಕೀಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿಲ್ಲ ಎಂದು ಹೇಳುವ ಯಡಿಯೂರಪ್ಪ ಎಲ್ಲಾ ಶಾಸಕರನ್ನು ಯಾಕೆ ಕರೆದುಕೊಂಡು ಹೋದರು? ಎಲ್ಲರನ್ನೂ ರೂಂನಲ್ಲಿರಿಸಿಕೊಂಡು ಮಜಾ ಮಾಡೋಕಾ ಶಾಸಕರಿರೋದು? ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಮೊದಲು ರಾಜ್ಯದಲ್ಲಿ ತಲೆದೋರಿರುವ ಬರದ ಬಗ್ಗೆ ಚಿಂತನೆ ಮಾಡಲಿ ಎಂದು ಹೇಳಿದರು.

ನಾವು ಈಗಾಗಲೇ ದೇವೇಗೌಡರೊಟ್ಟಿಗೆ ನಿಯೋಗ ತೆರಳಿ ಬರದ ಬಗ್ಗೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ. ಬಿಜೆಪಿಯವರು ಏನೇ ಪ್ರಯತ್ನ ಮಾಡಿದರೂ ರಾಜ್ಯ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಅವರು ಇನ್ನಷ್ಟು ದಿನ ಐಷಾರಾಮಿ ಹೋಟೆಲ್‍ನಲ್ಲಿದ್ದು ರಾಜಕೀಯ ಮಾಡಲಿ ಎಂದು ಹೇಳಿದರು.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಇತರರಿಗೆ ಈಗ ನೆನಪಾಗಿದೆ ಎಂಬ ಬಿಜೆಪಿ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ  ರೇವಣ್ಣ, ಅವರಿಗೆ ಮಾನ ಮರ್ಯಾದೆ ಇದ್ದರೆ ಕಡತ ತೆಗೆದು ನೋಡಲಿ. ದೇವೇಗೌಡರು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ಬರಕ್ಕೆ ಸಂಬಂಧಿಸಿದಂತೆ ಎಷ್ಟು ಬಾರಿ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ ಎಂಬುದನ್ನು ಈ ಕಡತದಿಂದ ಖಚಿತಪಡಿಸಿಕೊಳ್ಳಲಿ ಎಂದ ಅವರು, ಯಡಿಯೂರಪ್ಪನವರು ಸಮ್ಮಿಶ್ರ ಸರಕಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಅದರ ಬದಲು ಶೋಭಕ್ಕನನ್ನು ಚೆನ್ನಾಗಿ ನೋಡಿಕೊಳ್ಳಲಿ. ಶೋಭಕ್ಕನಿಗೆ ಮಹಿಳಾ ಕೋಟಾದಡಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿಸಲಿ ಎಂದು ಸಲಹೆ ನೀಡಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೋಭಕ್ಕ ಹಾಸನದಿಂದ ಸ್ಪರ್ಧೆ ಮಾಡಿದರೆ ಅದಕ್ಕೆ ನಮ್ಮ ಪಕ್ಷದಿಂದ ಸ್ವಾಗತವಿದೆ ಎಂದು ಹೇಳಿದರು.

ನನಗೆ ಯಾವ ಬಿಜೆಪಿಯವರೂ ಗಾಳ ಹಾಕಿಲ್ಲ. ಶಿವಲಿಂಗೇಗೌಡರು ಸೇರಿದಂತೆ ಇತರರಿಗೆ ಗೌರಿ ಶಂಕರ್ ಅವರು ದೂರವಾಣಿ ಮೂಲಕ ಆಪರೇಷನ್ ಕಮಲ ಮಾಡಲು ಪ್ರಯತ್ನ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಹೇಳಿದ್ದು ಶಿವಲಿಂಗೇಗೌಡರು. ಹಾಗಾಗಿ ನೀವು ಅವರನ್ನೇ ಕೇಳಬೇಕು ಎಂದರು.

ಜಿಲ್ಲೆಯ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ಮಾಡಿ ಸೂಚಿಸಿದ್ದೇನೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News