ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಕೋರ್ಟ್‌ಗೆ ಹಾಜರಾದ ಶಾಸಕ ಆನಂದ್ ಸಿಂಗ್, ನಾಗೇಂದ್ರ

Update: 2019-01-17 15:23 GMT

ಬೆಂಗಳೂರು, ಜ.17: ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ವಾರೆಂಟ್ ನೀಡಿದ್ದ ಹಿನ್ನೆಲೆಯಲ್ಲಿ ಶಾಸಕರಾದ ಆನಂದ್‌ ಸಿಂಗ್, ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ ಅವರ ಸಹಾಯಕ ಪಿ.ಎ.ಅಲಿಖಾನ್ ವಿಚಾರಣೆಗೆ ಹಾಜರಾದರು.

ಗುರುವಾರ ಮೂವರೂ ಸಿಟಿ ಸಿವಿಲ್ ಕೋರ್ಟ್‌ನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾದರು. ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ವಿಶೇಷ ತನಿಖಾ ದಳದ ಮನವಿ ಮೇರೆಗೆ ಕಾಂಗ್ರೆಸ್‌ನ ಇಬ್ಬರು ಶಾಸಕರಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ತನಿಖಾ ದಳದ ಮನವಿ ಮೇರೆಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ.ಪಾಟೀಲ್ ಅವರು ವಾರಂಟ್ ಜಾರಿ ಮಾಡಿದ್ದರು.

2009ರಲ್ಲಿ ಆನಂದ್ ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಕಂಪೆನಿಯಿಂದ ಅದಿರನ್ನು ಸಿಂಗಾಪುರ ಮತ್ತು ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಆರೋಪವಿದೆ. ಆನಂದ್ ಸಿಂಗ್ ಜೊತೆಗೆ ನಾಗೇಂದ್ರ ಒಡೆತನದ ಕಂಪನಿಯು ಈ ಅಕ್ರಮದಲ್ಲಿ ಭಾಗಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜ್ಯ ಸರಕಾರ ರಚಿಸಿದ ಎಸ್‌ಐಟಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ವಿಚಾರಣೆಗೆ ಹಾಜರಾಗುವಂತೆ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಈ ಇಬ್ಬರು ಶಾಸಕರು ಗೈರು ಹಾಜರಾಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News