ಲೈಂಗಿಕ ಕಿರುಕುಳ ಆರೋಪ: ಸಹದ್ಯೋಗಿ ದೂರು ದಾಖಲು

Update: 2019-01-17 17:00 GMT

ಬೆಂಗಳೂರು, ಜ.17: ಪೀಣ್ಯದ ಸ್ಕೆನೆಚ್ ಪ್ರೊಸೆಸ್ ಸೆಲ್ಯೂಷನ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶರತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಕಂಪನಿಯ ಸಹದ್ಯೋಗಿ ಯುವತಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶರತ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ಕೆಲಸದ ವೇಳೆ ಮೈಕೈ ಮುಟ್ಟಿ ಮಾತನಾಡಿಸುತ್ತಿದ್ದ. ಅಷ್ಟು ಮಾತ್ರವಲ್ಲದೇ ಯುವತಿಗೆ ಮನೆಯಲ್ಲಿ ಪಾರ್ಟಿ ನೆಪಹೇಳಿ ಲೈಂಗಿಕ ಕಿರುಕುಳ ನೀಡಿದ್ದರು. ಶರತ್ ಕಾಮಚೇಷ್ಟೆಯಿಂದ ನೊಂದ ಯುವತಿ ಎಚ್‌ಆರ್ ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೆ, ಕಂಪನಿಯ ವಿಭಾಗೀಯ ಮುಖ್ಯಸ್ಥರಾಗಿದ್ದ ಗುಣ ಕೆ.ತಂತ್ರಿ ಶರತ್ ಪರವಾಗಿದ್ದರು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಇದರಿಂದ ಮತ್ತಷ್ಟು ನೊಂದ ಯುವತಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಶರತ್ ಹಾಗೂ ಗುಣ ಕೆ. ತಂತ್ರಿ ವಿರುದ್ಧ ಐಪಿಸಿ ಸೆಕ್ಷನ್ 354ಅ, 354ಈ, 34, 345, 506, 114 ಅಡಿ ಪ್ರಕರಣ ದಾಖಲಾಗಿದೆ. ಈ ವಿಷಯ ತಿಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿತರಿಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News