ಜ.18: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ.ಪಾಟೀಲ್ ಅಧಿಕಾರ ಸ್ವೀಕಾರ

Update: 2019-01-17 17:07 GMT

ಬೆಂಗಳೂರು, ಜ. 17: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಅವರು ನಾಳೆ(ಜ.18) ಇಲ್ಲಿನ ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಸ್.ಶಂಕರ್ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ನಾಯಕರು, ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ 10ರಿಂದ 15 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಕಳೆದ ಸಾಲಿನಲ್ಲಿ ನಮ್ಮ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸೋತಿದ್ದೇವೆ. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಚುನಾವಣಾ ವೇಳೆ ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಎಂದ ರಾಮಲಿಂಗಾರೆಡ್ಡಿ, ಬಿಜೆಪಿ 10 ಪೈಸೆ ಕೆಲಸ ಮಾಡಿ 1ರೂಪಾಯಿ ಪ್ರಚಾರ ಪಡೆಯುತ್ತಿದ್ದಾರೆ. ನಾವು 1ರೂಪಾಯಿ ಕೆಲಸ ಮಾಡಿದ್ದರೂ, ಪ್ರಚಾರ ಬಯಸಲಿಲ್ಲ ಎಂದರು.

ಆಪರೇಷನ್ ಆತಂಕವಿಲ್ಲ: ಆಪರೇಷನ್ ಕಮಲ ಮಾಡ್ತಿದ್ದೇವೆ ಎಂದು ಮಹಾರಾಷ್ಟ್ರದ ಸಚಿವರೇ ಹೇಳಿದ್ದರು. ಬಿಜೆಪಿ ಶಾಸಕ ಉಮೇಶ್ ಕತ್ತಿ ಇದೇ ಮಾತನ್ನು ಉಲ್ಲೇಖಿಸಿದ್ದರು. ಅವರಿಗೆ ಆಡಳಿತ ಪಕ್ಷವಾಗಿ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಬಿ.ಎಲ್.ಶಂಕರ್ ಹೇಳಿದರು.

ಬಿಜೆಪಿಯವರಿಗೆ ಅಸ್ಥಿರತೆ ಇದೆ. ಹೀಗಾಗಿಯೇ ತಮ್ಮ ಶಾಸಕರನ್ನೆಲ್ಲ ಹೊಟೇಲ್‌ನಲ್ಲಿ ಕೂಡಿಹಾಕಲಾಗಿದೆ. ಆಪರೇಷನ್ ಕಮಲ ಆಮಿಷಕ್ಕೆ ಸಂಬಂಧಿಸಿದಂತೆ ಈ ಹಿಂದೆಯೆ ಬಿ.ಸಿ.ಪಾಟೀಲ್ ಆಡಿಯೋ ಬಹಿರಂಗಪಡಿಸಿದ್ದರು ಎಂದ ಅವರು, ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ್ ಅವರಿಗೆ ಮುಂಬೈನಲ್ಲೇನು ಕೆಲಸ ಎಂದು ಪ್ರಶ್ನಿಸಿದರು.

ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿರುವುದು ದೇಶಕ್ಕೆ ಗೊತ್ತು. ಆದರೆ, ನಮ್ಮ ಪಕ್ಷಕ್ಕೆ ಆಪರೇಷನ್ ಕಮಲದ ಆತಂಕವಿಲ್ಲ ಎಂದ ಅವರು, ಸಂಕ್ರಾಂತಿ ಹಬ್ಬವನ್ನು ಬಿಟ್ಟು, ಕ್ಷೇತ್ರವನ್ನು ಬಿಟ್ಟು ಬಿಜೆಪಿ ಶಾಸಕರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಐಷಾರಾಮಿ ಹೊಟೇಲ್‌ನಲ್ಲಿ ಕೂತು ಏನು ಕೆಲಸ ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News