ಅತ್ಯಾಚಾರ ಸಂತ್ರಸ್ತೆಗೆ ಬೆಂಬಲ: ವರ್ಗಾವಣೆ ಆದೇಶ ತಿರಸ್ಕರಿಸಿದ ಕ್ರೈಸ್ತ ಸನ್ಯಾಸಿನಿಯರು

Update: 2019-01-18 04:11 GMT

ತಿರುವನಂತಪುರ, ಜ. 18: ಕ್ಯಾಥೋಲಿಕ್ ಚರ್ಚ್‌ನ ಜಾಲಂಧರ್ ಧರ್ಮಪ್ರಾಂತ್ಯ, ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರಿಗೆ ನೀಡಿದ ಬೆಂಬಲ ಪುನರುಚ್ಚರಿಸಿದ್ದರೂ, ಬಿಷಪ್ ವಿರುದ್ಧ ಹೋರಾಟ ನಡೆಸುತ್ತಿರುವ ಐದು ಮಂದಿ ಕ್ರೈಸ್ತ ಸನ್ಯಾಸಿನಿಯರು ತಮ್ಮ ವರ್ಗಾವಣೆ ಆದೇಶವನ್ನು ಧಿಕ್ಕರಿಸಿದ್ದಾರೆ. ಇದರೊಂದಿಗೆ ವಿವಾದ ಹೊಸ ತಿರುವು ಪಡೆದಿದೆ.

"ಅತ್ಯಾಚಾರ ಸಂತ್ರಸ್ತೆಯ ಸುರಕ್ಷತೆಯ ಹೊಣೆಯನ್ನು ಯಾರಾದರೂ ವಹಿಸಿಕೊಂಡಲ್ಲಿ ಮಾತ್ರ ನಾವು ಚರ್ಚ್ ಸೂಚನೆಯನ್ನು ಪಾಲಿಸುತ್ತೇವೆ. ನಾವು ಆಕೆಯೊಬ್ಬಳನ್ನೇ ಬಿಟ್ಟರೆ, ಆಕೆ ಅಥವಾ ನಮಗೆಲ್ಲರಿಗೂ, ಫಾದರ್ ಕುರಿಯೋಕೋಸ್ ಅವರಿಗೆ ಆದ ಗತಿಯೇ ಆಗುತ್ತದೆ" ಎಂದು ಈ ಗುಂಪಿನ ಪರವಾಗಿ ಮಾತನಾಡಿದ ಸಿಸ್ಟರ್ ಅನುಪಮ ಹೇಳಿದ್ದಾರೆ.

ಬಿಷಪ್ ಮುಲಕ್ಕಲ್, 2014ರ ಮೇ 5ರಿಂದ 2016ರ ಮೇ 6ವರೆಗೆ ಕುರುವಿಲಂಗಾಡು ಸಂತ ಫ್ರಾನ್ಸಿಸ್ ಮಿಷನ್ ಹೋಮ್‌ನಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬಳ ಮೇಲೆ 14 ಬಾರಿ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಅವರ ಸಹೋದ್ಯೋಗಿಯಾಗಿದ್ದ ಫಾದರ್ ಕುರಿಯಾಕೋಸ್ ಕಟ್ಟುತ್ತರ, ಈ ಪ್ರಕರಣದಲ್ಲಿ ಬಿಷಪ್ ವಿರುದ್ಧ ಸಾಕ್ಷಿ ನುಡಿದ ತಿಂಗಳಲ್ಲಿ, ಹೊಶಿಯಾರ್‌ಪುರದ ದಸೂಯಾದಲ್ಲಿ ನಿಗೂಢ ಸಾವನ್ನಪ್ಪಿದ್ದರು.

ಈ ಕ್ರೈಸ್ತಸನ್ಯಾಸಿನಿಯರು ಪ್ರಸ್ತುತ ಕೊಟ್ಟಾಯಂ ಪಟ್ಟಣದ ಕಾನ್ವೆಂಟ್ ಒಂದರಲ್ಲಿ ವಾಸವಿದ್ದಾರೆ. ಹಿರಿಯ ಕ್ರೈಸ್ತ ಸನ್ಯಾಸಿನಿಯರಿಗೆ ಎಲ್ಲ ಸತ್ಯ ಗೊತ್ತಿದ್ದರೂ, ಪ್ರಕರಣದಲ್ಲಿ ಏನೂ ಮಾಡುತ್ತಿಲ್ಲ ಎಂದೂ ಅನುಪಮ ಆಪಾದಿಸಿದ್ದಾರೆ.

"ಸಿಸ್ಟರ್ ರೆಜಿನಾ ಎಲ್ಲಕ್ಕೂ ತಮ್ಮ ಕಣ್ಣುಮುಚ್ಚಿ ಕುಳಿತಿದ್ದಾರೆ. ನಮ್ಮ ಸಂತ್ರಸ್ತೆ ಸಹೋದ್ಯೋಗಿಯ ಬೆಂಬಲಕ್ಕಾಗಿ ಮಾತ್ರ ನಾವಿಲ್ಲಿಗೆ ಬಂದಿದ್ದೇವೆ. ಫ್ರಾಂಕೋಗೆ ಸಕಲ ಭದ್ರತೆ ನೀಡಲಾಗಿದೆ. ಆದರೆ ಆತನಿಂದ ಸಂತ್ರಸ್ತೆಯಾದ ಈಕೆ ಮಾತ್ರ ಇಲ್ಲಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News