ಆಪರೇಷನ್ ಕಮಲದಂತಹ ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು: ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್

Update: 2019-01-18 17:11 GMT

ಮೈಸೂರು,ಜ.18: ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಲು ಹೋಗಿ ವಿಫಲಗೊಂಡಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು ಎಂದು ಸ್ವಪಕ್ಷದ ಹಿರಿಯ ಮುಖಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.

ನಗರದ ವಿಜಯನಗರದಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನಡೆ ಹಾಗೂ ಬಿಜೆಪಿ ನಾಯಕರ ರಾಜಕೀಯ ಆಟವನ್ನು ಕಂಡು ತುಂಬಾ ಬೇಸವಾಗಿದೆ. 104 ಸ್ಥಾನ ಪಡೆದಿರುವ ಬಿಜೆಪಿ ವಿರೋಧ ಪಕ್ಷದಲ್ಲಿದ್ದು ಆ ಸ್ಥಾನವನ್ನು ಸಮರ್ಥವಾಗಿ ಎದುರಿಸಬೇಕಿತ್ತು. ಅದು ಬಿಟ್ಟು ಶಾಸಕರನ್ನು ರೆಸಾರ್ಟ್‍ಗೆ ಕರೆದುಕೊಂಡು ಹೋಗಿ ಕೆಟ್ಟ ವಾತಾವರಣವನ್ನು ನಿರ್ಮಾಣ ಮಾಡಬಾರದಿತ್ತು ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಕಂಡು ಬೇಸರ ತಂದಿದೆ. ಎಲ್ಲವನ್ನು ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದೇನೆ. ನನ್ನ 40 ವರ್ಷಗಳ ರಾಜಕೀಯ ಇಂತಹ ಕೆಟ್ಟ ರಾಜಕಾರಣವನ್ನು ನೋಡಿರಲಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಅದರ ವೈಫಲ್ಯವನ್ನು ಜನರಿಗೆ ತಿಳಿಸುವ ಕೆಲಸವನ್ನು ವಿರೋಧಪಕ್ಷ ಮಾಡಬೇಕು, ಅದನ್ನು ಬಿಟ್ಟು ಆಪರೇಷನ್ ಕಮಲದಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News