'ಯಡಿಯೂರಪ್ಪ ಕಣ್ಮರೆಯಾಗಿದ್ದಾರೆ, ಹುಡುಕಿ ಕೊಡಿ': ಪೊಲೀಸರಿಗೆ ದೂರು ನೀಡಿದ ಶಿಕಾರಿಪುರ ಕಾಂಗ್ರೆಸ್ ಕಾರ್ಯಕರ್ತರು

Update: 2019-01-18 17:58 GMT

ಶಿವಮೊಗ್ಗ, ಜ. 18: ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಸ್.ಯಡಿಯೂರಪ್ಪರವರು ಕಣ್ಮರೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ಶಿಕಾರಿಪುರ ತಾಲೂಕು ಯುವ ಕಾಂಗ್ರೆಸ್ ಘಟಕವು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದೆ. 

ಮಾಜಿ ಮುಖ್ಯಮಂತ್ರಿಗಳೂ ಆದ ಶಾಸಕ ಬಿ.ಎಸ್.ಯಡಿಯೂರಪ್ಪರವರು ಕಳೆದ ಕೆಲ ದಿನಗಳಿಂದ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಕ್ಷೇತ್ರದ ಮತದಾರರ ಕೈಗೆ ಸಿಗುತ್ತಿಲ್ಲ. ಇದರಿಂದ ಶಾಸಕರು ಕಣ್ಮರೆಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಿಕೊಡಬೇಕು ಎಂದು ಪೊಲೀಸರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. 

ನಿರ್ಲಕ್ಷ್ಯ: ತಾಲೂಕಿನ ಅಂಬ್ಲಿಗೋಳದಲ್ಲಿ ಮಂಗನಕಾಯಿಲೆ ಪತ್ತೆಯಾಗಿದೆ. ಅಲ್ಲಿನ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ತಾಲೂಕಿನ ಶಾಸಕರು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ. ಈಗಾಗಲೇ ರಾಜ್ಯ ಸರ್ಕಾರ ತಾಲೂಕನ್ನು ಬರ ಪೀಡಿತವೆಂದು ಘೋಷಿಸಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿ ಕೂಡ ಭೇಟಿಯಿತ್ತು ಪರಿಶೀಲಿಸಿದೆ. ಆದರೆ ಈ ವೇಳೆಯೂ ಶಾಸಕರು ಹಾಜರಿರಲಿಲ್ಲ. ತಾಲೂಕಿನಲ್ಲಿ ಆವರಿಸಿರುವ ಬರ ಪರಿಸ್ಥಿತಿ ಕುರಿತಂತೆ ಸಚಿವ ಸಂಪುಟ ಉಪ ಸಮಿತಿಗೆ ಮಾಹಿತಿ ನೀಡುವ ಗೋಜಿಗೂ ಹೋಗಿಲ್ಲ. ಇದೆಲ್ಲವನ್ನು ಗಮನಿಸಿದರೆ ಶಾಸಕರಿಗೆ ಜನಪರ ಕಾಳಜಿ, ಹಿತಾಸಕ್ತಿಯೇ ಇಲ್ಲವಾಗಿದೆ ಎಂದು ಮುಖಂಡರು ದೂರಿದ್ದಾರೆ. 

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಬಡಗಿ ಫಾಲಾಕ್ಷಪ್ಪ, ಸುರೇಶ್ ಧಾರವಾಡ, ರೇಣುಕಾಸ್ವಾಮಿ, ರಾಜು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News