ಆಪರೇಷನ್ ಕಮಲ ಲಜ್ಜೆ ಬಿಟ್ಟ ಹೆಜ್ಜೆ

Update: 2019-01-19 04:24 GMT

ರಾಜ್ಯ ರಾಜಕೀಯದಲ್ಲಿ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಜನರು ಒಳಗೊಳಗೆ ಕುದಿಯಾಗುತ್ತಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ತಕ್ಷಣವೇ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸಿತ್ತು. ತನ್ನ ಬಳಿ ಅಧಿಕಾರ ಹಿಡಿಯುವಷ್ಟು ಶಾಸಕರು ಇಲ್ಲವೇ ಇಲ್ಲ ಎನ್ನುವುದು ಗೊತ್ತಿದ್ದೂ ಅದು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಪ್ರಸ್ತಾವ ಸಲ್ಲಿಸಿತ್ತು. ಆದರೆ ಡಿಕೆಶಿಯವರ ಮುತ್ಸದ್ದಿತನದಿಂದಾಗಿ ಆಪರೇಶನ್ ಕಮಲ ಸಂಪೂರ್ಣ ವಿಫಲವಾಯಿತು. ಈ ಸಂದರ್ಭದಲ್ಲಿ ಯಡಿಯೂರಪ್ಪ ತೀವ್ರ ಮುಖಭಂಗ ಅನುಭವಿಸಿದ್ದರು. ಸ್ವಪಕ್ಷೀಯರಿಂದಲೇ ಅವರು ಹಾಸ್ಯಾಸ್ಪದರಾಗಿದ್ದರು. ಮುಂದೆ ಕುಮಾರಸ್ವಾಮಿಯವರು ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಿಜೆಪಿಯ ಅಧಿಕಾರ ಲಾಲಸೆಯಿಂದ ಸರಕಾರ ರಚನೆ ತೀರಾ ತಡವಾಯಿತು. ಎಲ್ಲ ನಾಟಕೀಯ ಬೆಳವಣಿಗೆಗಳು ಮುಗಿದು, ಇನ್ನಾದರೂ ಬಿಜೆಪಿ ವಿರೋಧಪಕ್ಷ ಸ್ಥಾನವನ್ನು ಯೋಗ್ಯವಾಗಿ ನಿಭಾಯಿಸುತ್ತದೆ ಎನ್ನುವಾಗ ಮತ್ತೆ ಅದು ಮುಖ್ಯಮಂತ್ರಿ ಕುರ್ಚಿಗಾಗಿ ನಾಲಗೆ ಚಾಚಿದೆ. ಕಳೆದೆರಡು ವಾರಗಳಿಂದ ಅದು ತನ್ನ ಶಾಸಕರನ್ನೆಲ್ಲ ಕರೆದುಕೊಂಡು ಹೊರ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಮತಹಾಕಿದ ಜನರನ್ನು ಸಂಪೂರ್ಣ ಮರೆತು, ರೆಸಾರ್ಟ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಶಾಸಕರು. ಆದರೆ ಇಲ್ಲೂ ಮತ್ತೆ ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದಾರೆ. ಸಂಕ್ರಾತಿಯ ಹೊತ್ತಿಗೆ ಇನ್ನೇನು ಸರಕಾರ ಉರುಳಿಯೇ ಬಿಟ್ಟಿತು ಎಂದು ಮಾಧ್ಯಮಗಳು ಅಬ್ಬರಿಸಿದ್ದೇ ಬಂದು, ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಯನ್ನು ಸುಳ್ಳು ಮಾಡಿ, ಭಿನ್ನಮತೀಯರು ಮತ್ತೆ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದಾರೆ. ಇತ್ತ ಎಲ್ಲಿ ಸರಕಾರ ಬೀಳುತ್ತದೆಯೋ ಎಂಬ ಆತಂಕದಿಂದ ಮೈತ್ರಿ ಸರಕಾರವೂ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿಟ್ಟು ಕಾಳು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ಕುತಂತ್ರ ರಾಜಕೀಯ ರಾಜ್ಯದ ಆಡಳಿತದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ಯಡಿಯೂರಪ್ಪ ಅವರ ವರ್ಚಸ್ಸು ಇಳಿಯುತ್ತಿದೆ ಮಾತ್ರವಲ್ಲ, ಜನರು ಬಿಜೆಪಿಯ ಕುರಿತಂತೆ ಅಸಹನೆಯಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ.

ಸಾಧಾರಣವಾಗಿ ಚುನಾವಣೆಯ ಫಲಿತಾಂಶ ಹೊರ ಬಿದ್ದಾಕ್ಷಣ, ಯಾವುದಾರದೊಂದು ರೀತಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವೋ ಎಂದು ಯೋಜನೆ ರೂಪಿಸುವುದು ಸಹಜ. ಬಿಜೆಪಿಯೂ ಅದನ್ನು ಮಾಡಿತು ಮತ್ತು ಅದರಲ್ಲಿ ಸಂಪೂರ್ಣ ವಿಫಲವಾಯಿತು. ಒಂದೆರಡು ಶಾಸಕರನ್ನೂ ತನ್ನ ಪಕ್ಷದೆಡೆಗೆ ಸೆಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕನಾಗಿ ಜನರ ಪರವಾಗಿ ಸದನದಲ್ಲಿ ಮಾತನಾಡುತ್ತಾ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸುವ ಕಡೆಗೆ ಗಮನ ಹರಿಸಬೇಕಾಗಿತ್ತು. ಒಬ್ಬ ನಾಯಕ ಜನರ ಸೇವೆ ಮಾಡಲು ಮುಖ್ಯಮಂತ್ರಿಯಾಗಲೇಬೇಕೆಂದೇನೂ ಇಲ್ಲ. ವಿರೋಧ ಪಕ್ಷದ ನಾಯಕನಾಗಿಯೂ ಜನರ ಸೇವೆ ಮಾಡಲು ಅವರಿಗೆ ಅವಕಾಶವಿದೆ. ಸರಕಾರದ ತಪ್ಪು ಹೆಜ್ಜೆಗಳನ್ನು ಗುರುತಿಸಿ, ಅದನ್ನು ಜನರ ಬಳಿಗೆ ತರುವುದು ಅವರ ಜವಾಬ್ದಾರಿಯಾಗಿದೆ. ಆಡಳಿತ ಪಕ್ಷ ಜನಪರವಾಗಿ ಕೆಲಸ ಮಾಡಬೇಕಾದರೆ ಯೋಗ್ಯವಾದ ವಿರೋಧ ಪಕ್ಷವಿರಬೇಕು. ಒಬ್ಬ ಸಮರ್ಥ ವಿರೋಧಪಕ್ಷ ನಾಯಕನಾಗಲು ಎಲ್ಲ ಯೋಗ್ಯತೆ ಯಡಿಯೂರಪ್ಪರಿಗೆ ಇದೆ. ಆದರೆ ಅದನ್ನು ಬಳಸುವ ಬದಲು ಮತ್ತೆ ಮತ್ತೆ ಮುಖ್ಯಮಂತ್ರಿಯಾಗಲು ಹವಣಿಸುವುದು, ಜೊತೆಗೆ ವಿಫಲವಾಗುವುದು ಖಂಡಿತವಾಗಿಯೂ ಯಡಿಯೂರಪ್ಪರಿಗೆ ಒಳಿತನ್ನು ಮಾಡುವುದಿಲ್ಲ. ಬಹುಶಃ ಬಿಜೆಪಿಯೊಳಗಿನ ನಾಯಕರು ಯಡಿಯೂರಪ್ಪರನ್ನು ತಮಾಷೆಯ ವಸ್ತುವಾಗಿಸುವ ಭಾಗವಾಗಿ ಅವರಿಗೆ ಆಪರೇಷನ್ ಕಮಲದ ಕುಮ್ಮಕ್ಕು ನೀಡುತ್ತಿದ್ದಾರೆ. ರಾತ್ರಿ ಕಂಡ ಬಾವಿಗೆ ಯಡಿಯೂರಪ್ಪ ಹಗಲು ಬಿದ್ದಿದ್ದಾರೆ.

ಸದ್ಯದ ಬೆಳವಣಿಗೆಗೆ ಕೇವಲ ಬಿಜೆಪಿಯನ್ನಷ್ಟೇ ಹೊಣೆ ಮಾಡುವಂತಿಲ್ಲ. ಮಾರುವ ಸರಕುಗಳು ಇರುವಾಗ ಅದನ್ನು ಕೊಳ್ಳುವವರು ಇರುವುದು ಸಹಜ. ಒಂದು ನಿರ್ದಿಷ್ಟ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು, ಇದೀಗ ಹಣ, ಅಧಿಕಾರಕ್ಕಾಗಿ ಇನ್ನೊಂದು ಪಕ್ಷಕ್ಕೆ ತಮ್ಮನ್ನು ಮಾರಿಕೊಳ್ಳಲು ಹೊರಟವರೂ ಸಂವಿಧಾನ ದ್ರೋಹಿಗಳೇ ಆಗಿದ್ದಾರೆ. ಅವರು ಮಾರುತ್ತಿರುವುದು ಜನರು ಅವರ ಮೇಲಿಟ್ಟ ವಿಶ್ವಾಸವನ್ನು. ಅದನ್ನೊಮ್ಮೆ ಮಾರಿದರೆ, ಮತ್ತೆ ಕೊಂಡುಕೊಳ್ಳಲಾಗದು ಎನ್ನುವ ಪ್ರಜ್ಞೆ, ಆಪರೇಷನ್ ಮಾಡಿಸಿಕೊಳ್ಳಲು ಸಿದ್ಧರಾಗಿರುವ ಮೈತ್ರಿ ಸರಕಾರದೊಳಗಿರುವ ಶಾಸಕರು ಅರಿತುಕೊಳ್ಳಬೇಕಾಗಿದೆ. ಒಂದು ರೀತಿಯಲ್ಲಿ ಬಿಜೆಪಿಯ ಅಧಿಕಾರ ಹಿಡಿಯುವ ದುರಾಸೆಯನ್ನು ಮೈತ್ರಿ ಸರಕಾರದೊಳಗಿರುವ ಶಾಸಕರು ತಮ್ಮ ದುರುದ್ದೇಶ ಈಡೇರಿಸಲು ಬಳಸಿಕೊಳ್ಳುತ್ತಿದ್ದಾರೆ. ಮೈತ್ರಿ ಸರಕಾರದೊಳಗಿರುವ ಈ ಶಾಸಕರು ನಿಜಕ್ಕೂ ತಮ್ಮ ನಾಯಕರ ಕುರಿತಂತೆ ಭ್ರಮ ನಿರಸನಗೊಂಡು ಬಿಜೆಪಿಯ ಜೊತೆಗೆ ಸೇರಲು ನಿರ್ಧರಿಸಿದ್ದರೆ ಅದಕ್ಕಾದರೂ ಒಂದು ಅರ್ಥವಿರುತ್ತಿತ್ತು. ಆದರೆ ಇವರು, ಸರಕಾರದೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಿಜೆಪಿಯನ್ನು ‘ಬಳಸಿ’ ಕೊಳ್ಳುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಬ್ಲಾಕ್ ಮೇಲ್’ ಮಾಡಲು ಬಿಜೆಪಿ ಸೇರಿದಂತೆ ನಟಿಸುತ್ತಿದ್ದಾರೆ. ಈ ಬಿಜೆಪಿ ನಾಯಕರೋ ‘ಉಂಡೆ ಬಾಯಿಗೆ ಬಿತ್ತು’ ಎಂಬಂತೆ ರೆಸಾರ್ಟ್‌ನಲ್ಲಿ ಅವರನ್ನಿಟ್ಟು ಸಾಕುತ್ತಿದ್ದಾರೆ. ಆದರೆ ಕಾಂಗ್ರೆಸ್‌ನೊಳಗೆ ಅಸಮಾಧಾನಹೊಂದಿರುವ ಶಾಸಕರಿಗೂ ಗೊತ್ತು, ಬಿಜೆಪಿ ಸದ್ಯಕ್ಕೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು. ಬಿಜೆಪಿಯ ಅಧಿಕಾರ ದಾಹ, ಮೈತ್ರಿ ಸರಕಾರದೊಳಗಿರುವ ಶಾಸಕರ ಸಮಯಸಾಧಕತನ ಇವೆಲ್ಲದರ ನೇರ ಬಲಿಪಶು ಮತದಾರರು.

ಈ ರೆಸಾರ್ಟ್ ರಾಜಕೀಯಕ್ಕೆ ಬಿಜೆಪಿ ಕೋಟಿಗಟ್ಟಳೆ ಸುರಿಯುತ್ತಿದೆ. ಜನರ ಸೇವೆ ಮಾಡಬೇಕಾದ ಶಾಸಕರು ರೆಸಾರ್ಟ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ದುರಂತವೆಂದರೆ, ‘ಆಪರೇಷನ್ ಕಮಲ’ವನ್ನು ಬಿಜೆಪಿಯ ರಾಜಕೀಯ ಹೆಗ್ಗಳಿಕೆಯೇನೋ ಎಂಬಂತೆ ಕೆಲವು ಮಾಧ್ಯಮಗಳು ವೈಭವೀಕರಿಸುತ್ತಿವೆ. ಈ ಆಪರೇಷನ್ ಕಮಲದಲ್ಲಿ ಕೆಲವು ಮಾಧ್ಯಮಗಳೂ ನೇರವಾಗಿ ಭಾಗವಹಿಸಿವೆ. ಮಾಧ್ಯಮಗಳು ರಾಜಕೀಯ ಪಕ್ಷಗಳ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಾಗ ಮಾತ್ರ ಇದು ಸಂಭವಿಸುತ್ತದೆ. ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿಗೆ ಕೆಲವು ರಾಜ್ಯಗಳಲ್ಲಾದರೂ ಹಿಡಿತ ಸಾಸಬೇಕಾಗಿದೆ. ಈಗಾಗಲೇ ಅದು ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿರುವುದರಿಂದ ಅದು ಆತಂಕಕಕೀಡಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಅಡ್ಡದಾರಿಯಿಂದ ಅಕಾರವನ್ನು ಹಿಡಿಯಲು ಸಾಧ್ಯವೋ ಎಂದು ಕೇಂದ್ರದ ಬಿಜೆಪಿ ನಾಯಕರು ಸಂಚು ಹೂಡುತಿದ್ದಾರೆ. ಯಾವ ದಾರಿಯಲ್ಲಾದರೂ ಸರಿ, ಅಕಾರ ಮುಖ್ಯ ಎನ್ನುವುದು ಲಜ್ಜೆಯಿಲ್ಲದವರ ರಾಜಕೀಯ. ಇತ್ತೀಚೆಗೆ ಮೋದಿಯ ಭಕ್ತನೊಬ್ಬ ‘ಲಜ್ಜೆಬಿಟ್ಟು ಮೋದಿಗಾಗಿ ಹೆಜ್ಜೆ ಹಾಕಿ’ ಎಂದು ಜನರಿಗೆ ಕರೆಕೊಟ್ಟಿದ್ದ. ಇದೀಗ ನೋಡಿದರೆ ಕೇಂದ್ರದ ಬಿಜೆಪಿ ನಾಯಕರೇ ಲಜ್ಜೆ ಬಿಟ್ಟು ಹೆಜ್ಜೆ ಹಾಕಲು ಹೊರಟಿದ್ದಾರೆ. ಇದು ದೇಶದ ಪ್ರಜಾಸತ್ತೆಯ ದುರಂತದ ಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News