ತುಮಕೂರು: ಶಾಲಾ ಶಿಕ್ಷಕರ ಏಳು ತಿಂಗಳ ವೇತನ ಭರಿಸಿದ ಶಾಸಕ ಡಿ.ಸಿ.ಗೌರಿಶಂಕರ್

Update: 2019-01-18 17:59 GMT

ತುಮಕೂರು.ಜ.18: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಮಸ್ಕಲ್ ಗ್ರಾಮದ ಸರಕಾರಿ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದ ಎಲ್ ಕೆಜಿ ಹಾಗೂ ಯುಕೆಜಿ ಆಂಗ್ಲ ಮಾಧ್ಯಮ ತರಗತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಬಾಕಿ ಇದ್ದ ಏಳು ತಿಂಗಳ ವೇತನ ನಾಲ್ಕು ಲಕ್ಷ ರೂ. ಗಳನ್ನು ಶಾಸಕ ಡಿಸಿ ಗೌರಿಶಂಕರ್ ಸ್ವಂತ ಹಣದಲ್ಲಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಸ್ಕಲ್ ಗ್ರಾಮದಲ್ಲಿ ನೂತನ ಸರಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಹಾಗೂ ಕಳೆದ ಶೈಕ್ಷಣಿಕ ವರ್ಷದಿಂದ ಆರಂಭವಾಗಿರುವ ಆಂಗ್ಲಶಾಲಾ ಶಿಕ್ಷಕರ ವೇತನ ಸಮಸ್ಯೆ ನಿವಾರಿಸಿ ಮಕ್ಕಳ ಹಾಗು ಪೋಷಕರ ಸಮಸ್ಯೆ ಆಲಿಸಿ ಮಾತನಾಡುತ್ತಿದ್ದ ಅವರು, ಸರಕಾರದ ಅನುಮತಿ ಇಲ್ಲದಿದ್ದರೂ ಸಹ ಕಳೆದ ಶೈಕ್ಷಣಿಕ ಸಾಲಿನಿಂದ ಮಸ್ಕಲ್ ಗ್ರಾಮದ ಸರಕಾರಿ ಶಾಲೆಯಲ್ಲಿ ಎಲ್ ಕೆಜಿ ಹಾಗು ಯುಕೆಜಿ ಮಕ್ಕಳಿಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿತ್ತು. ಯಾರೋ ಒಬ್ಬರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಸರಕಾರದ ನಿಯಮ ಗಾಳಿಗೆ ತೂರಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ನಿಯಮಾವಳಿ ಮೀರಿ ಅನುಮತಿ ನೀಡಿರುವುದು ಗೋಚರವಾಗುತ್ತಿದೆ. ಈ ಶಾಲೆಗೆ ಶಿಕ್ಷಕರಾಗಿ ನೇಮಕವಾಗಿರುವವರಿಗೆ ಇಲ್ಲಿಯವರೆಗೂ ವೇತನ ಸಿಕ್ಕಿಲ್ಲ. ಹಿಂದಿನವರು ಮಾಡಿದ ತಪ್ಪನ್ನು ನಾನು ಮಾಡುವುದಿಲ್ಲ. ನಾನು ಯಾರ ವಿರುದ್ಧವೂ ಕ್ರಮ ಜರುಗಿಸುವುದಿಲ್ಲ. ಹಿಂದಿನವರು ಮಾಡಿರುವ ತಪ್ಪು ನಾನು ಮಾಡುವುದಿಲ್ಲ. ನನಗೆ ಮಕ್ಕಳ ಹಾಗು ಪೋಷಕರ ಹಿತ ಮುಖ್ಯ. ಹಿಂದೆ ಈ ಶಾಲೆಗೆ ಭೇಟಿ ನೀಡಿದ್ದಾಗ ಶಿಕ್ಷಕರ ವೇತನ ಸಮಸ್ಯೆ ಗಮನಕ್ಕೆ ಬಂದಿತ್ತು. ಏಳು ತಿಂಗಳ ನಾಲ್ಕು ಲಕ್ಷ ರೂಗಳ ವೇತನವನ್ನು ಸ್ವಂತ ಹಣದಿಂದ ಭರಿಸುವುದಾಗಿ ಸ್ಥಳದಲ್ಲಿಯೇ ವೇತನ ನೀಡಿದರು.

ಸರಕಾರ ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ಕಡ್ಡಾಯ ಮಾಡಲು ಮುಂದಾಗಿದೆ. ರಾಜ್ಯದ ಮಕ್ಕಳ ಹಾಗು ಪೋಷಕರ ಹಿತದೃಷ್ಟಿಯಿಂದ ಮುಂದಿನ ಅಧಿವೇಶನದಲ್ಲಿ ಈಗ ಸರಕಾರ ಕಡ್ಡಾಯ ಮಾಡಲು ಹೊರಡಿರುವ ಆಂಗ್ಲ ಮಾಧ್ಯಮವನ್ನು ಎಲ್ ಕೆಜಿ ಹಾಗು ಯುಕೆಜಿ ಹಂತಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.

ರಾಜ್ಯದ ಸರಕಾರಿ ಶಾಲೆಗಳ ಮಕ್ಕಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಸೈಕಲ್ ವಿತರಿಸುವ ಸಂಬಂಧ ಮುಖ್ಯಮಂತ್ರಿಗಳ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ಇನೂ ಹೆಚ್ಚಿನ  ಗುಣಮಟ್ಟದ ಸೈಕಲ್ ವಿತರಿಸಲು ಕ್ರಮ ಕೈಗೊಳ್ಳುವ ಜೊತೆಗೆ ಸೈಕಲ್‍ಗಳ ಗುಣಮಟ್ಟವನ್ನು ತಾವೇ ಖುದ್ದಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಸ್ಕಲ್ ಶಾಲೆಗೆ ಕ್ರೀಡಾಪರಿಕರ ಖರೀದಿಸಲು ಐವತ್ತು ಸಾವಿರ ನಗದನ್ನು ಶಾಸಕರು ಸ್ಥಳದಲ್ಲೇ ಎಸ್ ಡಿಎಂಸಿ ಅಧ್ಯಕ್ಷರಿಗೆ ನೀಡಿದರು. ಎಲ್ಲಾ ಸರಕಾರಿ ಶಾಲೆಗಳಿಗೆ ನೂರು ಲೀಟರ್ ಸಾಮರ್ಥ್ಯದ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಣಕಾಸಿನ ಅಗತ್ಯತೆ ನೋಡಿಕೊಂಡು ಅನುಷ್ಠಾನಗೊಳಿಸುತ್ತೇನೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳ ಹಾಜರಾತಿ 200 ರ ಗಡಿ ದಾಟಬೇಕು. ಅಗತ್ಯ ಬಿದ್ದರೆ ಇನ್ನೂ ಇಬ್ಬರು ಶಿಕ್ಷಕರನ್ನು ನೇಮಿಸಿಕೊಳ್ಳಿ. ನನಗೆ ಮಕ್ಕಳ ಹಾಗು ಪೋಷಕರ ಹಿತ ಮುಖ್ಯ. ಅವರ ವೇತನವನ್ನು ನಾನೇ ಖುದ್ದು ಭರಿಸುತ್ತೇನೆ ಎಂದು ಭರವಸೆ ನೀಡಿದರು.

ಬಳಿಕ ಹೊನ್ನುಡಿಕೆನ ಉರ್ದುಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಲಾ ವಾರ್ಷಿಕೋತ್ಸವಕ್ಕೆ 25 ಸಾವಿರ ನಗದು ನೀಡಿದರು. 35 ಲಕ್ಷ ರೂ. ಗಳ ವೆಚ್ಚದ ರಂಗಮಂದಿರ ಕಟ್ಟಡ ನಿರ್ಮಾಣಕ್ಕೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಮಸ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಮೋಹನ್, ಮಸ್ಕಲ್ ತಾ.ಪಂ ಸದಸ್ಯ ಗೋವಿಂದರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್‍ ಕುಮಾರ್, ಜೆಡಿಎಸ್ ಮುಖಂಡ ಬೂಚನಹಳ್ಳಿ ವೆಂಕಟೇಶ್, ಯೋಗೇಶಪ್ಪ, ರಂಗಸ್ವಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗದಾಮಪ್ಪ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಜೆಡಿಎಸ್ ಮುಖಂಡರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News